ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗಾಗಿ ಆಗ್ರಹಿಸಿ ನಾಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಅವರು, ಕನ್ನಡಿಗರಿಗೆ ಉದ್ಯೋಗ ಮಸೂದೆ ಮಂಡಿಸಲೇಬೇಕೆಂದು ನಾಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಿರೋದಾಗಿ ತಿಳಿಸಿದ್ದಾರೆ.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕವನ್ನು ಕೂಡಲೇ ವಿಧಾನಸಭೆಯಲ್ಲಿ ಮಂಡಿಸಬೇಕು. ಕನ್ನಡಿಗರ ಭವಿಷ್ಯದ ಪ್ರಶ್ನೆಯ ಮಸೂದೆಯನ್ನು ಮಂಡಿಸುವುದಾಗಿ ಭರವಸೆ ನೀಡಿ, ಮಸೂದೆಯನ್ನು ಹಿಂದಕ್ಕೆ ಪಡೆದಿರುವುದು ಸರಿಯಲ್ಲ. ಸದನ ಮುಗಿಯುವುದರೊಳಗಾಗಿ ಮಸೂದೆಯನ್ನು ಮಂಡಿಸಬೇಕು ಅಂತ ಒತ್ತಾಯಿಸಿದ್ದಾರೆ. ನನ್ನ ನೇತೃತ್ವದಲ್ಲಿ ನಾಳೆ ಮಧ್ಯಾಹ್ನ 12 ಗಂಟೆಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ. ಈ ಪ್ರತಿಭಟನೆಯಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದಂತ ಸಾರಾ ಗೋವಿಂದು ಭಾಗಿಯಾಗಲಿದ್ದಾರೆ ಎಂದಿದ್ದಾರೆ. ಕನ್ನಡ ಸೇನೆಯ ರಾಜ್ಯಾಧ್ಯಕ್ಷರಾದ ಕೆ ಆರ್ ಕುಮಾರ್, ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್, ಹೆಚ್.ವಿ ಗಿರೀಶ್ ಗೌಡ ಹಾಗೂ ಇತರೆ ಕನ್ನಡಪರ ಸಂಘಟನೆಯ ಮುಖಂಡರು ಭಾಗಿಯಾಗುವುದಾಗಿ ಮಾಹಿತಿ ನೀಡಿದ್ದಾರೆ.