- ಸಾಹಿತಿ ಕಮಲಾ ಹಂಪನಾ ಅವರು ಹೃದಯಾಘಾತದಿಂದ ನಿಧನ
- ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಕಮಲಾ ಹಂಪನಾ
ಸಾಹಿತಿ ಕಮಲಾ ಹಂಪನಾ (89)ಅವರು ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ. ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರು, ಅಮೆರಿಕನ್ ಡಾಲರ್ಸ್ ಕಾಲೋನಿಯಲ್ಲಿ ಪುತ್ರಿ ಆರತಿ ಮನೆಯಲ್ಲಿ ವಾಸವಿದ್ದರು. ಶುಕ್ರವಾರ ರಾತ್ರಿ 10 ಗಂಟೆ ವೇಳೆಗೆ ಅವರಿಗೆ ಹೃದಯಾಘಾತ ಆಗಿತ್ತು. ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ರಾಜಾಜಿನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಡಾ. ಕಮಲಾ ಹಂಪನಾ ಅವರು ಸಾಹಿತಿ, ಸಂಶೋಧಕರಾಗಿರುವ ಪತಿ ಹಂಪಾ ನಾಗರಾಜಯ್ಯ, ಇಬ್ಬರು ಪುತ್ರಿಯರನ್ನ ಹಾಗೂ ಒಬ್ಬ ಪುತ್ರನನ್ನ ಅಗಲಿದ್ದಾರೆ. ಕಮಲಾ ಹಂಪನಾ ಅವರು 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡಿದ್ದಾರೆ. ಮೂಡಬಿದರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಇವರು ಅಧ್ಯಕ್ಷರಾಗಿದ್ದರು. ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡುವ ನಾಡೋಜ ಪ್ರಶಸ್ತಿ ಇವರಿಗೆ ಸಂದಿವೆ.
ಇವರು ಅನೇಕ ಕಥಾಸಂಕಲನ, ಸಂಶೋಧನೆ, ವಿಮರ್ಶೆ-ವೈಚಾರಿಕ, ವಚನ ಸಂಕಲನ, ಶಿಶು ಸಾಹಿತ್ಯ, ಕಾದಂಬರಿಗಳನ್ನು ಬರೆದಿದ್ದಾರೆ. ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಚಂದನಾ, ಬಣವೆ ಇವರ ಕಥಾಸಂಕಲನಗಳು ಆಗಿವೆ. ತುರಂಗ ಭಾರತ – ಒಂದು ಅಧ್ಯಯನ, ಶಾಂತಿನಾಥ, ಆದರ್ಶ ಜೈನ ಮಹಿಳೆಯರು, ಅನೇಕಾಂತವಾದ, ಜೈನ ಸಾಹಿತ್ಯ ಪರಿಸರ, ನಾಡು ನುಡಿ ನಾವು, ಬದ್ದವಣ ಹಾಗೂ ರೋಣದ ಬಸದಿ ಇವರ ಸಂಶೋಧನೆಗಳು ಆಗಿವೆ.