ಸಸ್ಯಕಾಶಿ ಲಾಲ್ ಬಾಗ್ ಲಕ್ಷಾಂತರ ಪ್ರವಾಸಿಗರನ್ನ ಕೈಬೀಸಿ ಕರೆಯುವ ಸ್ಥಳ. ಸಿಟಿ ಜನರ ನೆಚ್ಚಿನ ತಾಣ ಕೂಡ ಹೌದು. ಈಗ ಇದೇ ಜಾಗಕ್ಕೆ ಹೋಗ್ಬೇಕು ಅಂದ್ರೆ ಜೇಬು ಗಟ್ಟಿಯಾಗಿರಬೇಕು. ಯಾಕೆ ಅಂತೀರಾ, ಈ ಸ್ಟೋರಿ ನೋಡಿ.
ಕಾಂಕ್ರೀಟ್ ಮಯವಾಗಿರುವ ಬೆಂಗಳೂರಿನಲ್ಲಿ ಗ್ರೀನರಿ ಅಂತ ಹೇಳಿಕೊಳ್ಳಲಿಕ್ಕೆ ಇರೋದೇ ಲಾಲ್ಬಾಗ್ ಆ್ಯಂಡ್ ಕಬ್ಬನ್ ಪಾರ್ಕ್. ಅದರಲ್ಲೂ ಲಾಲ್ಬಾಗ್ಗೆ ನಿತ್ಯ ಸಾವಿರಾರು ಜನ ಬರ್ತಾರೆ. ಆದರೆ ಈಗ ತೋಟಗಾರಿಕೆ ಇಲಾಖೆ ಲಾಲ್ಬಾಗ್ ಪ್ರವೇಶ ಶುಲ್ಕವನ್ನ ಸೈಲೆಂಟಾಗಿ ಹೆಚ್ಚಳ ಮಾಡಿದೆ.
ಈ ಮೊದಲು ಮಕ್ಕಳಿಗೆ 10 ರೂಪಾಯಿ ವಯಸ್ಕರಿಗೆ 30 ರೂಪಾಯಿ ಇತ್ತು. ಇದೀಗ ಈ ದರವನ್ನು ಪರಿಷ್ಕರಿಸಿದ್ದು, ಮಕ್ಕಳಿಗೆ 20 ರೂಪಾಯಿ ಹಾಗೂ ವಯಸ್ಕರಿಗೆ 50 ರೂಪಾಯಿಗೆ ಏರಿಸಿದೆ. ಇದಕ್ಕೆ ನಡಿಗೆದಾರ ಸಂಘ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾತನಾಡಿರುವ ನಡಿಗೆದಾರರ ಸಂಘದ ಸದಸ್ಯ ಕೆಂಪಣ್ಣ, ಸರ್ಕಾರ ಕ್ರಮ ಭಾರೀ ಅನ್ಯಾಯ, ಏಕೆಂದರೆ ಹಳ್ಳಿಯಿಂದ ಬೆಂಗಳೂರಿಗೆ ಬಂದ ಒಂದು ಕುಟುಂಬ 50 ರೂಪಾಯಿ ಕೊಟ್ಟು ಒಳಗೆ ಬರಬೇಕು ಎಂದರೇ ಹೇಗೆ ನೀವೇ ಹೇಳಿ. ಹಲವರು ಈಗ ವಾಪಸ್ ಹೋಗ್ತಿದ್ದಾರೆ. ಸರ್ಕಾರದಲ್ಲಿ ಎಷ್ಟೋ ಕೋಟಿ ಕೊಳ್ಳೆ ಹೊಡೆದು ಮಾಡ್ತಾರೆ. ಇಂತಹ ಸ್ಥಳದಲ್ಲಿ ಸಾರ್ವಜನಿಕರಿಗೆ ಇಷ್ಟು ಶುಲ್ಕ ಹಾಕೋದು ಎಷ್ಟು ಸರಿ? ಪಾರ್ಕ್ ಪ್ರವೇಶ ಉಚಿತ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನು ಓದಿ: ದೊಡ್ಮನೆಯಿಂದ ಮಾನಸ ಔಟ್: ಕ್ಷಮೆ ಕೇಳಿದ ತುಕಾಲಿ ಸಂತು!
ಈಗಾಗಲೇ ಪಾರ್ಕ್ ನ ಹಲವು ಭಾಗಗಳನ್ನು ಮುಚ್ಚಿ ಸಾರ್ವಜನಿಕರಿಗೆ ಪ್ರವೇಶ ಇಲ್ಲ ಎಂದು ಬೋರ್ಡ್ ಹಾಕಿದ್ದಾರೆ. ನಿರ್ವಹಣೆ ಕೊರತೆಯಿಂದ ಅವುಗಳನ್ನು ಮುಚ್ಚಿ ಸಂಪೂರ್ಣ ಹಾಳು ಮಾಡ್ತಿದ್ದಾರೆ. ಏಕಾಏಕಿ ಟಿಕೆಟ್ ದರ 50 ಮಾಡಿದರೆ ಏನು ಹೇಳೋದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.