ಬೆಂಗಳೂರು:ಬಿಬಿಎಂಪಿಗೆ ಬರೊಬ್ಬರಿ 50 ಕೋಟಿ ರೂ. ಟ್ಯಾಕ್ಸ್ ಕಟ್ಟದ ಹಿನ್ನೆಲೆ ಮೇ10ರಂದು ಮಂತ್ರಿ ಮಾಲ್ಗೆ ಬೀಗ ಜಡಿದಿದ್ದರು. ಬಳಿಕ ಒಂದು ವಾರದ ನಂತರ ಮಾಲನ್ನು ಕೋರ್ಟ್ನ ಆದೇಶದ ಮೇರೆಗೆ ರೀ ಒಪನ್ ಮಾಡಲಾಗಿದೆ. ಮಾಲ್ಗೆ ಈ ಪೈಕಿ 20 ಕೋಟಿ ರೂ.ಗಳನ್ನ ಜುಲೈ 31 ರೊಳಗೆ ಪಾವತಿಸುವುದಾಗಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಮಾಲ್ ತೆರೆಯಲು ಸೂಚನೆ ನೀಡಲಾಗಿದೆ. 250ಕ್ಕೂ ಅಧಿಕ ಮಳಿಗೆ ಹಾಗೂ ವ್ಯಾಪಾರ ಹಿನ್ನೆಲೆಯಲ್ಲಿ ಹೈಕೋರ್ಟ್ ಬಿಬಿಎಂಪಿಗೆ ಮಾಲ್ ತೆರೆಯುವಂತೆ ಸೂಚನೆ ನೀಡಿದೆ.
ಮಾಲ್ಗೆ ಬೀಗ ಹಾಕಿರುವ ಬಿಬಿಎಂಪಿಯ ಕ್ರಮ ಪ್ರಶ್ನಿಸಿ ಮಾಲೀಕರು ಸಲ್ಲಿಸಿದ್ದ ತಕರಾರು ಅರ್ಜಿ, ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ರಜಾ ಕಾಲದ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ಅರ್ಜಿದಾರ ಕಂಪನಿಯ ಹಣಕಾಸು ಅಕಾರಿ ಪ್ರಮಾಣಪತ್ರ ಸಲ್ಲಿಸಿ, 2024ರ ಜು.31ರೊಳಗೆ 20 ಕೋಟಿ ರೂ.ಗಳನ್ನು ಬಿಬಿಎಂಪಿಗೆ ಪಾವತಿಸುವುದಾಗಿ ನ್ಯಾಯಪೀಠಕ್ಕೆ ಮುಚ್ಚಳಿಕೆ ನೀಡಿದರು.
ಈ ಹಿಂದೆಯೂ ತೆರಿಗೆ ಸರಿಯಾಗಿ ಕಟ್ಟದೇ ಇರುವುದಕ್ಕೆ ಮಂತ್ರಿ ಮಾಲ್ ಗೆ ಕೆಲವು ಬಾರಿ ಬೀಗ ಬಿದ್ದಿತ್ತು. ಆದರೂ, ಅಲ್ಲಿನ ಆಡಳಿತ ಮಂಡಳಿ ಈ ಬಗ್ಗೆ ಗಂಭೀರವಾಗಿ ಆಲೋಚಿಸಿಲ್ಲ. ಪದೇ ಪದೇ ತೆರಿಗೆ ಕಟ್ಟದೆ ಇರುಸು ಮುರುಸಿಗೆ ಮಾಲ್ ಒಳಗಾಗುತ್ತಿದೆ. ಇದೇ ವರ್ಷ ಮಾರ್ಚ್ ನಲ್ಲಿಯೂ ಮಾಲ್ ಗೆ ಬೀಗ ಬಿದ್ದಿತ್ತು.
ಮಾ. 16ರಂದು ಮಾಲ್ ಗೆ ಆಗಮಿಸಿದ್ದ ಬಿಬಿಎಂಪಿ ಅಧಿಕಾರಿಗಳು ಮಾಲ್ ಸೀಜ್ ಮಾಡಿದ್ದರು. ಆ ಸಂದರ್ಭದಲ್ಲಿ ದೊಡ್ಡ ಮೊತ್ತದ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದ ಮಾಲ್ ಗೆ ಒನ್ ಟೈಮ್ ಪೇಮೆಂಟ್ ಆಫರ್ ನೀಡಿದ್ದ ಅಧಿಕಾರಿಗಳು ಅಲ್ಲಿಂದ ತೆರಳಿದ್ದರು. ಆಗಲೂ ತೆರಿಗೆ ಕಟ್ಟುವ ವಿಚಾರವನ್ನು ಮಾಲ್ ನ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಲೇ ಇಲ್ಲ ಎಂದು ಹೇಳಲಾಗುತ್ತಿದೆ.