ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿಕೃಷ್ಣ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದಾಖಲೆ ಬಿಡುಗಡೆ ಮಾಡಿದ್ದಾರೆ. ಮೈಸೂರು ನಗಾರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಎ1 ಆರೋಪಿಯಾಗಿದ್ದು, ಲೋಕಾಯುಕ್ತದಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮುಡಾ ನಿವೇಶನ ಹಂಚಿಕೆಯಲ್ಲಿ ಪ್ರಭಾವ ಬೀರಿದ್ದಾರೆ ಎಂದು ದೂರು ನೀಡಿದ್ದ ಸ್ನೇಹಮಯಿಕೃಷ್ಣ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಹೌದು! ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಹಂಚಿಕೆ ಮಾಡಲಾದ ನಿವೇಶನಗಳ ಕ್ರಯಪತ್ರಕ್ಕೆ ತಹಶೀಲ್ದಾರರೇ ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ. ಕ್ರಯಪತ್ರ ನೋಂದಣಿ ಮಾಡಿಸಿಕೊಳ್ಳುವವರು ನೋಂದಣಿಗೆ ಸಂಬಂಧಿಸಿದ ಶುಲ್ಕಗಳನ್ನು ಪಾವತಿ ಮಾಡಬೇಕು, ಅದೇ ರೀತಿ ಎನ್.ಮಂಜುನಾಥ್ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಕ್ರಯಪತ್ರ ಗಮನಿಸಿ, ಮುಡಾದ ವಿಶೇಷ ತಹಶೀಲ್ದಾರ್ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ದೂರುದಾರ ಸ್ನೇಹಮಯಿ ಕೃಷ್ಣ ಸಿಎಂ ಪತ್ನಿ ಪಾರ್ವತಿ ಅವರ ಕ್ರಯಪತ್ರದಲ್ಲಿ ಮುದ್ರಾಂಕ ಶುಲ್ಕ ಪಾವತಿಯನ್ನು ತಹಶೀಲ್ದಾರ್ ಮಾಡಿದ್ದಾರೆ. ನನ್ನ ಆರೋಪಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ಎಂದು ಕೇಳಿದ್ದಾರೆ.