ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾಗಿದೆ. ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದು, ಸಿದ್ದರಾಮಯ್ಯ ಅವರಿಗೆ ತಲೆಬಿಸಿ ಹೆಚ್ಚಿಸಿದೆ. ಪ್ರಾಸಿಕ್ಯೂಷನ್ಗೆ ಅನುಮತಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಕಾನೂನು ತಜ್ಞರ ಜೊತೆ ಚರ್ಚೆ ನಡೆಸುತ್ತಿದ್ದು ರಾಜ್ಯಪಾಲರ ಕ್ರಮವನ್ನು ಎದುರಿಸುವ ದಾರಿಗಳ ಬಗ್ಗೆ ಚಿಂತಿಸಲಾಗುತ್ತಿದೆ.
ತಜ್ಞರ ಪ್ರಕಾರ ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಮುಖವಾಗಿ ಮೂರು ಆಯ್ಕೆಗಳಿವೆ, ಮೊದಲನೆಯದಾಗಿ ತಮ್ಮ ವಿರುದ್ಧ ರಾಜ್ಯಪಾಲರು ಕ್ರಿಮಿನಲ್ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್) ಅನುಮತಿ ನೀಡಿರುವುದರ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಈ ಮೂಲಕ ಕಾನೂನು ಪ್ರಕಾರವೇ ಎದುರಿಸುವುದು.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾಮಾನ್ಯ ವ್ಯಕ್ತಿಯಾಗಿ ತಮ್ಮ ತನಿಖೆಯನ್ನು ಎದುರಿಸುವುದು, ಬಳಿಕ ತಮ್ಮ ಮೇಲಿನ ಆರೋಪಗಳು ಸುಳ್ಳು ಎಂದು ಸಾಬೀತಾದ ಬಳಿಕ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಆಯ್ಕೆ ಕೂಡ ಇದೆ. ಇನ್ನು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡದೇ, ಅಧಿಕಾರದಲ್ಲಿದ್ದುಕೊಂಡೇ ಕಾನೂನು ಹೋರಾಟವನ್ನು ಎದುರಿಸುವುದು. ಕೋರ್ಟ್ ಆದೇಶದ ಮೇಲೆ ಕಣ್ಣು ವಕೀಲ ಟಿ.ಜೆ. ಅಬ್ರಹಾಂ, ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ನೀಡಿರುವ ದೂರಿನ ಮೇರೆಗೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಸಿಎಂ ಇದೀಗ ತನಿಖೆ ಅಥವಾ ನ್ಯಾಯಾಲಯದ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈಗಾಗಲೇ ದೂರು ಸಲ್ಲಿಕೆಯಾಗಿತ್ತು, ಇದೀಗ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿರುವ ಕಾರಣ ಪ್ರಕರಣಕ್ಕೆ ಮಹತ್ವ ಬಂದಿದೆ. ಈಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಎಂಗೆ ಸಮನ್ಸ್ ಕೊಡಬಹುದು, ಅಥವಾ ಹಗರಣ ನಡೆದಿದೆ ಎನ್ನುವ ಅನುಮಾನವಿದ್ದರೆ ತನಿಖೆಗೆ ಅನುಮತಿ ಕೊಡಬಹುದು ಅಥವಾ ದೂರಿನಲ್ಲಿ ಸತ್ಯಾಂಶ ಇಲ್ಲ ಎನಿಸಿದರೆ ಖಾಸಗಿ ದೂರನ್ನು ವಜಾಗೊಳಿಸಬಹುದು.
ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ, ಕಾನೂನು ತಜ್ಞರ ಜೊತೆ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಗುಪ್ತಚರ ಇಲಾಖೆ ಮುಖ್ಯಸ್ಥ ಶರತ್ ಚಂದ್ರ ಅವರ ಜೊತೆ ಕೂಡ ಚರ್ಚೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪರವಾಗಿ ಸಚಿವ ಸಂಪುಟ ನಿಂತಿದ್ದು, ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ.