ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಆರ್ಟಿಐ ಕಾರ್ಯಕರ್ತ ಟಿ. ಜೆ. ಅಬ್ರಹಾಂ ಅವರು ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿದ್ದಾರೆ. ಈಗಾಗಲೇ ಸಿಎಂ ವಿರುದ್ಧ ಅನೇಕ ದಾಖಲೆಗಳನ್ನು ನೀಡಿದ್ದ ಅಬ್ರಹಾಂ, ಇದೀಗ ಮತ್ತಷ್ಟು ದಾಖಲೆಗಳನ್ನು ನೀಡಿದ್ದಾರೆ.
ರಾಜಭವನಕ್ಕೆ ಬರುವಂತೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಸೂಚಿಸಿದ ಹಿನ್ನೆಲೆ ಅಬ್ರಹಾಂ ಭೇಟಿಯಾಗಿದ್ದರು. ಮುಡಾ ಹಗರಣ ಕುರಿತು ಮತ್ತಷ್ಟು ದಾಖಲೆಗಳನ್ನು ರಾಜ್ಯಪಾಲರು ಕೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ರಾಜ್ಯಪಾಲರು ಅನುಮತಿ ಕೊಡುತ್ತಾರಾ ಎಂಬ ಪ್ರಶ್ನೆಗಳು ಮೂಡಿವೆ.
ರಾಜ್ಯಪಾಲರ ಭೇಟಿ ಬಳಿಕ ಟಿ.ಜೆ. ಅಬ್ರಹಾಂ ಮಾತನಾಡಿ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ನನ್ನ ಬೇಡಿಕೆ ಏನಿತ್ತೋ ಅದರ ಮೇರೆಗೆ ಸರ್ಕಾರಕ್ಕೆ ರಾಜ್ಯಪಾಲರು ಶೋಕಾಸ್ ನೊಟೀಸ್ ಕೊಟ್ಟಿದ್ದರು. ಆದರೆ ಸಚಿವ ಸಂಪುಟ ಸಿಎಂ ತಪ್ಪಿಲ್ಲ, ರಾಜ್ಯಪಾಲರು ನೋಟಿಸ್ ಕೊಟ್ಟಿರೋದೇ ತಪ್ಪು ಅಂತ ನಿರ್ಣಯ ಮಾಡಿದೆ. ಅಬ್ರಹಾಂ ಸರಿಯಿಲ್ಲ ಅಂತಲೂ ಸರ್ಕಾರ ಆಪಾದನೆ ಮಾಡಿದೆ. ಹೀಗಾಗಿ ಪ್ರಕರಣದ ಬಗ್ಗೆ ರಾಜ್ಯಪಾಲರಿಗೆ ಸ್ಪಷ್ಟನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಸರ್ಕಾರ ನನ್ನ ಮೇಲೆ ಮಾಡಿರುವ ಆರೋಪ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇನೆ. ನನಗೆ ತಿಳಿದ ಮಟ್ಟಿಗೆ ರಾಜ್ಯಪಾಲರು ಸಿಎಂಗೆ ಎರಡನೇ ಶೋಕಾಸ್ ನೋಟಿಸ್ ಕೊಟ್ಟಿಲ್ಲ. ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ ಎಂದರೆ ಅವರಿಗೆ ಪ್ರಕರಣವನ್ನು ಮುಂದುವರಿಸಲು ಆಸಕ್ತಿ ಇದೆ ಎಂದರ್ಥ. ಕಳೆದ ಗುರುವಾರ ರಾಜ್ಯಪಾಲರ ಸಮಯ ಕೇಳಿದ್ದೆ, ಇವತ್ತು ಬರಲು ಹೇಳಿದ್ದರು, ಬಂದು ಸ್ಪಷ್ಟೀಕರಣ ಕೊಟ್ಟಿದ್ದೇನೆ ಎಂದರು.
ನನ್ನ ವಿರುದ್ಧ ಯಾವ ದೂರೂ ಇಲ್ಲ. ಸರ್ಕಾರಕ್ಕೆ ನಾನು ನೇರ ಸವಾಲ್ ಹಾಕುತ್ತೇನೆ. ನನ್ನ ವಿರುದ್ಧ ಕೇಸ್ ಹುಡುಕಿ, ಹುಡುಕಲು ಆಗದಿದ್ದರೆ ಹೇಗೆ ಹುಡುಕಬೇಕು ಅಂತ ನನ್ನ ಕೇಳಿ ಎಂದು ಕಿಡಿಕಾರಿದ್ದಾರೆ.