ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ ಮಾಡಿರುವ ಘಟನೆ ಶ್ರೀರಾಮಪುರದ ಸಾಯಿಬಾಬ ನಗರದಲ್ಲಿ ನಡೆದಿದೆ. ರಾತ್ರಿ ಸುಮಾರು 2 ಗಂಟೆಗೆ ಈ ಘಟನೆ ನಡೆದಿದ್ದು, ಶ್ರೀರಾಂಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆಗೀಡಾದ ವ್ಯಕ್ತಿ ಕುಮಾರ್ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
ಕುಮಾರ್ ಶ್ರೀರಾಮಪುರದಲ್ಲಿ ಹೊಟೇಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ನಿನ್ನೆ ರಾತ್ರಿ ಕುಮಾರ್ ಹಾಗೂ ಸ್ನೇಹಿತ ದಯಾಳ್ ಮಧ್ಯೆ ಹಣದ ವ್ಯವಹಾರದ ಹಿನ್ನೆಲೆ ಮಾತುಕತೆ ನಡೆದಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಈ ಕೊಲೆ ನಡೆದಿದೆ ಎನ್ನಲಾಗಿದೆ. ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆರೋಪಿಗಳು ಪರಾರಿಯಾಗಿದ್ದರು. ಆರೋಪಿ ದಯಾಳ್, ಮೃತ ಕುಮಾರ್ ಕಳೆದ 15 ವರ್ಷದಿಂದ ಸ್ನೇಹಿತರಾಗಿದ್ದರು. ಕುಮಾರ್ ಹಾಗೂ ಸ್ನೇಹಿತರ ಮಧ್ಯೆ 50 ಲಕ್ಷ ರೂಪಾಯಿಗೂ ಅಧಿಕ ಹಣದ ವ್ಯವಹಾರ ನಡೆದಿತ್ತು. ಫೈನಾನ್ಸ್ ಮಾಡಿಕೊಂಡಿದ್ದ ದಯಾಳ್ಗೆ ಇತ್ತೀಚೆಗೆ ಸಿಕ್ಕಾಪಟ್ಟೆ ಲಾಸ್ ಆಗಿತ್ತು. ಹೀಗಾಗಿ ಕುಮಾರ್ಗೆ ಹಣ ಹಿಂದಿರುಗಿಸುವಂತೆ ದಯಾಳ್ ಕೇಳಿದ್ದ. ಇದೇ ವಿಷಯಕ್ಕೆ ನಿನ್ನೆ ಕರೆಸಿ ಮದ್ಯಪಾನ ಮಾಡಿಸಿ ಹಣ ವಾಪಸ್ ಕೇಳಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಕುಮಾರ್ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶ್ರೀರಾಮಪುರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಕೊಲೆಯಾದ ಸ್ಥಳದಲ್ಲಿ ಸಿಕ್ಕ ಸುಳಿವಿನ ಹಿನ್ನೆಲೆಯಲ್ಲಿ ಶ್ರೀರಾಮಪುರ ಪೊಲೀಸರು ಆರೋಪಿ ದಯಾಳ್ ಅನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.