ನಾಗಮಂಗಲದಲ್ಲಿ ಅಂಗಡಿ ಸುಟ್ಟವರು, ಚಪ್ಪಲಿ, ಕಲ್ಲು ಎಸೆದವರನ್ನು ಕೇಸಿನಲ್ಲಿ ಸೇರಿಸಿಲ್ಲ. ಹಿಂದೂಗಳಿಗೆ ಒಂದು ರೀತಿ, ಮುಸಲ್ಮಾನರಿಗೆ ಇನ್ನೊಂದು ನೀತಿ. ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ? ಇದು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾಗಮಂಗಲದಲ್ಲಿ ಗಣಪತಿ ಹಬ್ಬ ಮಾಡುವ, ಮೆರವಣಿಗೆ ಹೋಗುವ ಹಿಂದೂ ಯುವಕರ ಮೇಲೆ ನೂರಾರು ಕಲ್ಲು ಎಸೆದಿದ್ದಲ್ಲದೇ, ಗಣಪತಿ ಮೂರ್ತಿ ಮೇಲೆ ಚಪ್ಪಲಿ ಎಸೆದಿದ್ದಾರೆ. ಹಿಂದೂಗಳ ಮೇಲೆ ಲಾಠಿಚಾರ್ಜ್, ಕಲ್ಲೆಸೆತ ಆಗಿದೆ. ಹಿಂದೂಗಳ ಹತ್ತಾರು ಅಂಗಡಿ ಸುಟ್ಟಿದ್ದಾರೆ. ಆದರೆ ಹಿಂದೂಗಳನ್ನೇ ಪ್ರಮುಖ ಆರೋಪಿಗಳನ್ನಾಗಿ ಮಾಡಿ (ಎ1, ಎ2, ಎ3 ಹೀಗೆ) ಕೇಸು ಹಾಕಿದ್ದಾರೆ ಎಂದು ಆಕ್ಷೇಪಿಸಿದರು.
ಜಾತ್ಯತೀತ, ಪ್ರಜಾಪ್ರಭುತ್ವವಾದಿ, ಸಂವಿಧಾನ ಯಥಾವತ್ ಜಾರಿಗೊಳಿಸುವ ಸರ್ಕಾರ ಎಂದು ಕಾಂಗ್ರೆಸ್ಸಿಗರು ಹೇಳಿಕೊಳ್ಳುತ್ತಾರೆ. ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಅಟ್ರಾಸಿಟಿ ಕೇಸ್ ಆಗಿದ್ದು, ಬಂಧಿಸಿದ್ದೀರಿ. ಆದರೆ ಒಂದು ತಿಂಗಳಿಗೂ ಹಿಂದೆ ಇದೇ ಅಟ್ರಾಸಿಟಿ ಕೇಸ್ ಕಾಂಗ್ರೆಸ್ಸಿನ ಶಾಸಕ ಚನ್ನಾರೆಡ್ಡಿ ಮೇಲೂ ಆಗಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ರಾಜಾರೋಷವಾಗಿ ಭಾಗವಹಿಸುವ ಅವರನ್ನು ಇನ್ನೂ ಬಂಧಿಸಿಲ್ಲ. ಇದಾ ನಿಮ್ಮ ಪ್ರಜಾಪ್ರಭುತ್ವ? ಇದಾ ನಿಮ್ಮ ಸೆಕ್ಯುಲರಿಸಂ, ಇದಾ ನಿಮ್ಮ ಸಂವಿಧಾನ ಮಾನ್ಯ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.
ಇಂದು ವಿಧಾನಸೌಧದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಮುಖ್ಯಮಂತ್ರಿಗಳು ವೇದಿಕೆಯಲ್ಲಿದ್ದು, ಸಚಿವ ಮಹದೇವಪ್ಪ ಅವರು ಭಾಷಣ ಮಾಡುತ್ತಿದ್ದರು. ಒಬ್ಬ ಯುವಕ ಕಾಂಪೌಂಡ್ ಜಿಗಿದು ವಿವಿಐಪಿ ಗ್ಯಾಲರಿ ದಾಟಿ ವೇದಿಕೆ ಏರುತ್ತಿದ್ದಾನೆ. ಎಲ್ಲರೂ ಗಾಬರಿಗೊಂಡಿದ್ದಾರೆ. ಮುಖ್ಯಮಂತ್ರಿಗಳಿಗೆ, ಸಚಿವರು, ವಿಧಾನಸೌಧಕ್ಕೆ ಸೆಕ್ಯೂರಿಟಿ ಇಲ್ಲ. ಸಂಪೂರ್ಣ ಭದ್ರತಾ ವೈಫಲ್ಯ ಆಗಿದೆ. ಗೂಢಚರ ಇಲಾಖೆ, ಗೃಹ ಇಲಾಖೆ, ಪೊಲೀಸ್ ಇಲಾಖೆ ಕರ್ನಾಟಕದಲ್ಲಿ ಏನು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.