ʻನಮ್ಮ ಮೆಟ್ರೋʻ ನೇರಳ ಮಾರ್ಗದ ವೇಳಾಪಟ್ಟಿ ಇಂದಿನಿಂದ ಆರಂಭಗೊಂಡಿದ್ದು ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜಸ್ಟಿಕ್ನಿಂದ ಹೆಚ್ಚುವರಿ ರೈಲುಗಳ ಸಂಚಾರ ಆರಂಭವಾಗುತ್ತಿದೆ.
ಮೆಜೆಸ್ಟಿಕ್ ನಿಂದ ಪ್ರಸ್ತುತ ಒಂಬತ್ತು ರೈಲುಗಳ ಬದಲಾಗಿ ಹದಿನೈದು ರೈಲುಗಳು ಹೊರಡಲಿವೆ. ಈ 15 ರೈಲುಗಳಲ್ಲಿ 10 ರೈಲುಗಳು ಪಟ್ಟಂದೂರು ಅಗ್ರಹಾರ (ಐಟಿಪಿಎಲ್) ವರೆಗೆ, ನಾಲ್ಕು ವೈಟ್ಫೀಲ್ಡ್ವರೆಗೆ ಮತ್ತು ಒಂದು ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಚಲಿಸಲಿವೆ ಬಿಎಂಆರ್ ಸಿಎಲ್ ಶುಕ್ರವಾರ ಪ್ರಕಟಿಸಿದೆ.
ಬೆಳಗಿನ ಸಮಯದಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಪೂರ್ವದ ಕಡೆಗೆ ರೈಲುಗಳು ಹೊರಡಲಿವೆ. ಹೆಚ್ಚುವರಿಯಾಗಿ ಮೆಜಸ್ಟಿಕ್ನಲ್ಲಿ ಪ್ರತಿ ಮೂರು ವರೆ ನಿಮಿಷಗಳಿಗೆ ಒಂದರಂತೆ ಹಾದು ಹೋಗುವ ರೈಲುಗಳು ಸಹ ಬೆಳಗ್ಗೆ 10-25 ರವರೆಗೂ ನಿಯಮಿತವಾಗಿ ಲಭ್ಯವಿರುತ್ತದೆ ಎಂದು BMRCL ತಿಳಿಸಿದೆ.
ಪ್ರಯಾಣಿಕರ ನಿರಂತರ ಬೇಡಿಕೆಯನ್ನು ಪೂರೈಸಲು, ಪ್ರಸ್ತುತ ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಕೊನೆಗೊಳ್ಳುವ 14 ರೈಲುಗಳಲ್ಲಿ 6 ರೈಲುಗಳನ್ನು ಪಟ್ಟಂದೂರು ಅಗ್ರಹಾರ (ITPL) ವೈಟ್ಫೀಲ್ಡ್ ಕಡೆಗೆ ವಿಸ್ತರಿಸಲಾಗಿದೆ. ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ಪಟ್ಟಂದೂರು ಅಗ್ರಹಾರ (ITPL) ಕಡೆಗೆ ಪ್ರಯಾಣಿಸಲು ಮುಂದಿನ ರೈಲು ಪ್ರತಿ ಮೂರುವರೆ ನಿಮಿಷಗಳಿಗೆ ಒಂದಂರಂತೆ ಲಭ್ಯವಿರುತ್ತದೆ. ಸಂಜೆಯ ವೇಳೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 5 ನಿಮಿಷಕ್ಕೆ ಒಂದರಂತೆ ಬೈಯಪ್ಪನಹಳ್ಳಿಯಿಂದ 4-40 ರ ಬದಲಿಗೆ 4-20ಕ್ಕೆ ಮೈಸೂರು ರಸ್ತೆ ನಿಲ್ದಾಣದ ಕಡೆಗೆ ಪ್ರಾರಂಭವಾಗಲಿದೆ. ಹಸಿರು ಮಾರ್ಗದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು BMRCL ತಿಳಿಸಿದೆ.