ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕ್ರಿಸ್ಮಸ್ ಹಾಗೂ 2025ರ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ನ್ಯೂ ಇಯರ್ ಪಾರ್ಟಿಗೆ ಬಂದವರು ಕ್ಷೇಮವಾಗಿ ಮನೆಗೆ ತಲುಪುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.
ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಬಂದೋಬಸ್ತ್ ಕುರಿತು ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಕ್ರಿಸ್ ಮಸ್ ಮತ್ತು ಹೊಸ ವರ್ಷ ಆಚರಣೆ ವಿಜೃಂಭಣೆಯಿಂದ ಮಾಡಲಾಗುತ್ತದೆ. ಈ ವೇಳೆ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಕೆಲವು ವೇಳೆ ಅಹಿತಕರ ಘಟನೆಗಳು ನಡೆದು ಬಿಡುತ್ತದೆ. ಹೀಗಾಗಿ ಪೊಲೀಸರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
ಈಗಾಗಲೇ ಹೊಸ ವರ್ಷಾಚರಣೆಗೆ ಏನೆಲ್ಲಾ ತಯಾರಿ ಮಾಡಲಾಗಿದೆ ಎಂದು ರಿವ್ಯೂವ್ ಮಾಡಲಾಗಿದೆ. ಟ್ರಾಫಿಕ್, ಬಾರ್ & ರೆಸ್ಟೋರೆಂಟ್ ಗಳು, ನಗರದ ಪ್ರಮುಖ ಸ್ಥಳಗಳ ರೆಗ್ಯೂಲೇಷನ್ ಬಗ್ಗೆ ಚರ್ಚೆ ಆಗಿದೆ. ಡ್ರಗ್ ಕಂಟ್ರೋಲ್ ಹಾಗೂ ಮಹಿಳಾ ಸುರಕ್ಷತೆ ಬಗ್ಗೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯಬಾರದು ಅಂತ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ, ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ನಗರಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟು ರೆಗುಲೇಟಿಂಗ್ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇನ್ನು ಕೋವಿಡ್ ಅವಧಿಯಲ್ಲಿ ಇದ್ದಂತೆ ಈ ವರ್ಷದ 2025ರ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ ಇಲ್ಲ. ಆದರೆ ಎಲ್ಲವನ್ನೂ ರೆಗ್ಯೂಲೇಟ್ ಮಾಡಲಾಗುತ್ತಿದೆ. ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಸುಮಾರು 7 ಲಕ್ಷ ಜನ ಗ್ಯಾದರ್ ಆಗುವ ಸಾಧ್ಯತೆ ಇದೆ. ಇಲ್ಲಿಗೆ ಬಂದವರೆಲ್ಲರೂ ಸುರಕ್ಷಿತವಾಗಿ ವಾಪಸ್ ಮನೆಗೆ ಸೇರಬೇಕು. ಈ ಬಗ್ಗೆ ಪೊಲೀಸರು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಯಾವುದೇ ಏರಿಯಾದಲ್ಲಿ ಅಹಿತಕರ ಘಟನೆ ನಡೆದರೆ, ಆ ಏರಿಯಾ ಡಿಸಿಪಿ ಜವಾಬ್ದಾರಿ ಆಗಿರುತ್ತಾರೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ಗೃಹ ಡಾ.ಜಿ.ಪರಮೇಶ್ವರ್ ಹೇಳಿದರು.
ಬಿಬಿಎಂಪಿ, ಬಿಎಂಟಿಸಿ ಬಿಎಂಆರ್ಸಿಎಲ್, ಆರೋಗ್ಯ ಮತ್ತು ಅಗ್ನಿಶಾಮಕ ಇಲಾಖೆಯ ನೆರವು ಪಡೆದುಕೊಳ್ಳಬೇಕು. ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನಚ್ಚರಿಕೆ ವಹಿಸಬೇಕು. ಡ್ರಂಕ್ ಆಯಂಡ್ ಡ್ರೈವ್, ಬೈಕ್ ವೀಲಿಂಗ್ ಮಾಡುವ ಕಿಡಿಗೇಡಿಗಳು ಹಾಗೂ ಹಳೇ ಪ್ರಕರಣಗಳ ಆರೋಪಿಗಳ ಮೇಲೆ ನಿಗಾ ಇರಿಸಬೇಕು. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಿದರು.