ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಅಂದಿನ ಬಿಜೆಪಿ ಸರ್ಕಾರಕ್ಕೆ ‘ಪೇ ಸಿಎಂ’ ಎಂಬ ಪೋಸ್ಟರ್ ತೀವ್ರ ಮುಜುಗರ ಉಂಟು ಮಾಡಿತ್ತು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ನಡೆಸಲಾಗಿದ್ದ ಈ ಪೋಸ್ಟರ್ ಅಭಿಯಾನ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟು ಮಾಡಿತ್ತು. ರಾತ್ರೋ ರಾತ್ರಿ ನಗರದ ಹಲವು ಕಡೆಗಳಲ್ಲಿ ‘ಪೇ ಸಿಎಂ’ ಪೋಸ್ಟರ್ ಪತ್ತೆಯಾಗಿದ್ದವು. ಆದರೆ ಈ ಪೋಸ್ಟರ್ ಅಂಟಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೋರ್ಟ್ ಕೇಸ್ ಎಂದು ನ್ಯಾಯಾಲಯದಲ್ಲಿ ಅಲೆದಾಡುತ್ತಿದ್ದಾರೆ.
‘ಪೇ ಸಿಎಂ’ ಎಂಬ ಪೋಸ್ಟರ್ನ್ನು ಸಾಕಷ್ಟು ಕ್ರಿಯೇಟಿವ್ ಆಗಿ ಮಾಡಲಾಗಿತ್ತು. ಇದೇ ಪೋಸ್ಟರ್ ಹಿಂದೆ ಪ್ರಿಯಾಂಕ್ ಖರ್ಗೆ, ಸುನೀಲ್ ಕನಗೋಲ್ ತಂಡ ಕೆಲಸ ಮಾಡಿತ್ತು. ಪೋಸ್ಟರ್ಗಳನ್ನು ಗೋಡೆಗಳಿಗೆ ಅಂಟಿಸಿದ ಆರೋಪದ ಮೇಲೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿದ್ದ ಸಂಜಯ್, ವಿಶ್ವ ಮೂರ್ತಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇನ್ನು ಕೇಸ್ ಹಾಕಿಸಿಕೊಂಡ ಯುವಕರು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದರೂ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಕೆಪಿಸಿಸಿ ಅಧ್ಯಕ್ಷರು ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ಕೆಪಿಸಿಸಿ ಲೀಗಲ್ ಸೆಲ್ಗೆ ಸೂಚನೆ ನೀಡಿದರೂ ಕ್ರಮ ಆಗಿಲ್ಲವೆಂದು ಯುವಕರು ನ್ಯಾಯಾಲಯದಲ್ಲಿ ಅಲೆದಾಡುತ್ತಿದ್ದಾರೆ.
ಇನ್ನು ಈ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಸಂಜಯ್ ಎಂಬುವವರು, ನ್ಯಾಯಾಲಯದಲ್ಲಿ ನಿಂತುಕೊಂಡಿರುವ ತಮ್ಮ ಫೋಟೊ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ”ಮಂತ್ರಿಗಳ ಮಕ್ಕಳು ಸಂಸತ್ತಿನಲ್ಲಿ, ಬಡವರ ಮಕ್ಕಳು ಕೋರ್ಟ್ನಲ್ಲಿ. ಹೋಡಿರಿ ಚಪ್ಪಾಳೆ. ಇದೇ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಣ್ರೀ” ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಿ.ಟಿ ರವಿ ಕೇಸ್ ವಾಪಸ್ ತಗೊಂಡ ಸರ್ಕಾರ. ನಮ್ಮ ಕೇಸ್ಗಳು ಕಣ್ಣಿಗೆ ಕಾಣಲಿಲ್ಲವೆ ಎಂದು ಸಂಜಯ್, ವಿಶ್ವ ಮೂರ್ತಿ ಎಂಬ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.