ಬೆಂಗಳೂರು: ಬಿಡಿಎ ಕಾಂಪ್ಲೆಕ್ಸ್ಗಳನ್ನು ಲೀಸ್ಗೆ ಕೊಡುವ ಮೂಲಕ ಪರೋಕ್ಷ ಮಾರಾಟಕ್ಕೆ ದಿವಾಳಿಯತ್ತ ಮುನ್ನಡೆಯುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಇದರ ವಿರುದ್ಧ ಬಿಜೆಪಿಯು ಜನರ ಜೊತೆಗೂಡಿ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಎಚ್ಚರಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್ಎಸ್ಆರ್ ಲೇ ಔಟ್, ಆಸ್ಟಿನ್ ಟೌನ್, ಕೋರಮಂಗಲ, ವಿಜಯನಗರ, ಆರ್.ಟಿ.ನಗರ, ಸದಾಶಿವನಗರದ ಬಿಡಿಎ ಸ್ವತ್ತುಗಳನ್ನು ನುಂಗಲು ಹೊರಟಿದ್ದಾರೆ. 2013-18ರಲ್ಲಿ ಇದೇ ಮಾದರಿಯ ಯೋಜನೆ ಜಾರಿಗೊಳಿಸಲು ಕಾಂಗ್ರೆಸ್ ಸರಕಾರ ಮುಂದಾಗಿತ್ತು. ಇದರ ವಿರುದ್ಧ ಬೆಂಗಳೂರಿನ ಜನರು ಪ್ರತಿಭಟನೆ ಮಾಡಿದ್ದರು ಎಂದರು.
ಆಗ ಅದು ನಿಂತು ಹೋಗಿತ್ತು. ಮಡಿವಾಳದ ಆಸ್ತಿ ಕಾಂಗ್ರೆಸ್ ನಾಯಕರ ಪಾಲಾದಂತೆ ಇದು ಕೂಡ ಆಗಬಾರದೆಂದು ಜನರು ಹೋರಾಟ ಆರಂಭಿಸಿದ್ದಾರೆ. 3 ಸಾವಿರ ಕೋಟಿ ಬೆಲೆಬಾಳುವ ಆಸ್ತಿ ಇದು. ಇದರ ಹಿಂದೆ 200 ಕೋಟಿಗೂ ಮೇಲ್ಪಟ್ಟು ಕಿಕ್ ಬ್ಯಾಕ್ ಇದೆ ಎಂದು ಆರೋಪಿಸಿದರು.
ಇದೇನೂ ಕಾಂಗ್ರೆಸ್ಸಿಗರ ಅಪ್ಪನ ಆಸ್ತಿ ಅಲ್ಲ. ಬಿಡಿಎ ಹಿಂದಿನ ಅಧ್ಯಕ್ಷರು ಆಸ್ತಿಗಳನ್ನು ಉಳಿಸಿ ಬೆಳೆಸಿದ್ದಾರೆ. ‘ದಿನವೂ ಕೋಳಿ ಮೊಟ್ಟೆ ತಿನ್ನೋದ್ಯಾಕೆ? ಕೋಳಿಯನ್ನೇ ತಿಂದರೆ ಹೇಗೆ’ಎಂದು ಇವರು ಹೊರಟಿದ್ದಾರೆ ಎಂದು ಆರ್ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಕಾಂಗ್ರೆಸ್ ನುಂಗಣ್ಣಗಳ ಪಾಲಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಎಚ್ಎಸ್ಆರ್ನಲ್ಲಿ ಸತೀಶ್ ರೆಡ್ಡಿಯವರ ನೇತೃತ್ವದಲ್ಲಿ ಪ್ರತಿಭಟನೆಗೆ ಜನರು ಮುಂದಾಗಿದ್ದಾರೆ. ಸರಕಾರವು ಪಾಪರ್ ಆಗಿದ್ದರೆ ಬೇರೆ ಆದಾಯ ಮೂಲಗಳನ್ನು ಹುಡುಕಬೇಕು. ಸರಕಾರಿ ಆಸ್ತಿ ನುಂಗಿ ನೀರು ಕುಡಿಯಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು. ಟೆಂಡರ್ ಪ್ರಸ್ತಾಪವವನ್ನು ರದ್ದು ಮಾಡಬೇಕು. ಇಲ್ಲವಾದರೆ ವಿಧಾನಸಭೆ ಒಳಗೆ ಮತ್ತು ಹೊರಗಡೆ ಹೋರಾಟ ನಡೆಸುತ್ತೇವೆ ಎಂದು ಆರ್. ಅಶೋಕ್ ತಿಳಿಸಿದರು.