ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ದೇಶದ ಮಹಿಳೆಯರ ತಾಳಿ ಕೀಳುವ ಹೇಳಿಕೆಯಿಂದ ಮಹಿಳೆಯರ ಗೌರವಕ್ಕೆ ದಕ್ಕೆ ಉಂಟಾಗಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ 20 ಸಾವಿರ ದೂರು ದಾಖಲಾಗಿದೆ. ಹೀಗಾಗಿ ಕೂಡಲೇ ಪ್ರಧಾನಿ ನರೇಂದ್ರ ಮೋದಿಯವರನ್ನು ಚುನಾವಣಾ ಪ್ರಚಾರದಿಂದ ನಿರ್ಭಂಧಿಸಬೇಕೆಂದು ಸಂವಹನ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದರು.
ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಬೇರೆ ವಿಷಯಗಳಿಲ್ಲ. ಕೇವಲ ಪ್ರಚಾರದ ತೆವಲಿಗಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ತೆಗೆದುಕೊಂಡಿಲ್ಲ. ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸ್ವತಂತ್ರವಾಗಿ ಕೆಲಸ ಮಾಡುವ ಅಧಿಕಾರ ನೀಡಿದೆ. ಆದರೆ ಚುನಾವಣಾ ಆಯೋಗ ಇಲ್ಲಿಯವರೆಗೆ ಒಂದು ನೋಟೀಸ್ ಕೂಡ ನೀಡಿಲ್ಲ. ಕೂಡಲೇ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.