ಬೆಂಗಳೂರು: ಪಶ್ಚಿಮ ವಲಯದ ಪ್ರಮುಖ ರಸ್ತೆಗಳಲ್ಲಿ ಕೆಟ್ಟ ಪರಿಸ್ಥಿತಿಯಲ್ಲಿರುವಂತಹ ಕಡೆ ರಸ್ತೆ ದುರಸ್ತಿ ಕಾರ್ಯ ಮಾಡಲಾಗುತ್ತಿದೆ ಎಂದು ವಲಯ ಆಯುಕ್ತರಾದ ಅರ್ಚನಾ, ಐಎಎಸ್ ರವರು ತಿಳಿಸಿದರು.
ನಗರದ ಪಶ್ಚಿಮ ವಲಯದ ಓಕಳೀಪುರಂ ಸುಜಾತಾ ಟಾಕೀಸ್ ಮುಂಭಾಗ ಮಿಲ್ಲಿಂಗ್ ಮಾಡಿಕೊಂಡು ರಸ್ತೆ ದುರಸ್ತಿ ಕಾರ್ಯದ ಪರಿಶೀಲನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮುಖ ರಸ್ತೆಗಳ ಕೆಲ ಭಾಗವು ಪೂರ್ಣಮಟ್ಟದಲ್ಲಿ ಹಾಳಾಗಿದ್ದಲ್ಲಿ, ಸಮತಟ್ಟಾಗಿ ಇಲ್ಲದಿದ್ದಲ್ಲಿ ಅಥವಾ ಸಡಿಲವಾಗಿದ್ದಲಿ ಅಂತಹ ಜಾಗವನ್ನು ಮಿಲ್ಲಿಂಗ್ ಯಂತ್ರದ ಮೂಲಕ ಮಿಲ್ಲಿಂಗ್ ಮಾಡಿ, ದೂಳನ್ನು ಸ್ವಚ್ಛಗೊಳಿಸಿ ಟ್ಯಾಗ್ ಕೋಟ್ ಎಮಲ್ಷನ್ ಸಿಂಪಡಿಸಿದ ಬಳಿಕ ಬಿಟಮಿನ್ ಹಾಕಿ ರೋಲರ್ ಮೂಲಕ ಡಾಂಬರನ್ನು ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಮುಖ ರಸ್ತೆಗಳಲ್ಲಿ ಕೆಟ್ಟ ಸ್ಥಿತಿಯಲ್ಲಿರುವ ಕಡೆ ಮಾತ್ರ ಮಿಲ್ಲಿಂಗ್ ಮಾಡಿ ರಸ್ತೆ ದುರಸ್ತಿಕಾರ್ಯ ಮಾಡಲಾಗುತ್ತಿದೆ. ಉಳಿದೆಲ್ಲಾ ಕಡೆ ಹಾಟ್ ಮಿಕ್ಸ್ ಹಾಗೂ ಕೋಲ್ಡ್ ಮಿಕ್ಸ್ ಬಳಸಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತದೆ. ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ಬಗ್ಗೆ ಪ್ರತಿ ನಿತ್ಯ ಅಧಿಕಾರಿಗಳಿಂದ ವರದಿ ಪಡೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪ್ರಮುಖ ರಸ್ತೆಗಳಲ್ಲಿ ನಿರ್ವಹಣೆ ಸರಿಯಾಗಿದ್ದು, ಬಾಕಿಯಿರುವ ರಸ್ತೆ ಗುಂಡಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ವಾರ್ಡ್ ರಸ್ತೆಗಳಲ್ಲಿ ರಸ್ತೆ ಗುಂಡಿ ಗಮನ ತಂತ್ರಾಂಶದಲ್ಲಿ ಬರುವ ದೂರುಗಳ ಜೊತೆಗೆ ಇಂಜಿನಿಯರ್ ಗಳು ಕೂಡಾ ರಸ್ತೆಗಳನ್ನು ಪರಿಶೀಲಿಸಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ. ವಾರ್ಡ್ ರಸ್ತೆಗಳಲ್ಲಿರುವ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲಾಗುವುದೆಂದು ಹೇಳಿದರು.
ನೋಡಲ್ ಅಧಿಕಾರಿಗಳ ನಿಯೋಜನೆ
ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರಮುಖ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳಿಗೆ ಪ್ರತ್ಯೇಖವಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಶೀಘ್ರಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.