ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಎಸ್. ಎಂ. ಕೃಷ್ಣ ಅವರ ನಿಧನಕ್ಕೆ ಕರ್ನಾಟಕ ಮಾಧ್ಯಮ ಆಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಆಯೇಷಾ ಖಾನಂ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ಮಾದ್ಯಮ ವೃತ್ತಿಯ ಆರಂಭದ ದಿನಗಳಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದರು ಎಂದು ಸ್ಮರಿಸಿದ ಅವರು, ಕೃಷ್ಣ ಅವರು ತಮಗೆ ಎದುರಾದ ಕಠಿಣ ಸವಾಲುಗಳನ್ನು ಅತ್ಯಂತ ತಾಳ್ಮೆಯಿಂದ, ಪ್ರಬುದ್ಧತೆಯಿಂದ ಎದುರಿಸಿದರು ಎಂದು ಸ್ಮರಿಸಿಕೊಂಡಿದ್ದಾರೆ.
ಇದರೊಂದಿಗೆ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದರಲ್ಲದೆ, ರಾಜ್ಯವು ಇಂದು ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಅವರ ಕೊಡುಗೆ ಅತಿ ಮುಖ್ಯವಾದುದು ಎಂದು ತಿಳಿಸಿದ್ದಾರೆ. ವಿದೇಶಾಂಗ ಸಚಿವರಾಗಿಯೂ ಅವರು ತಮ್ಮ ಛಾಪು ಮೂಡಿಸಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ