ಮುಖಕ್ಕೆ ಬೆಡ್ಶೀಟ್ ಸುತ್ತಿಕೊಂಡು ಎಟಿಎಂ ಕೇಂದ್ರಕ್ಕೆ ನುಗ್ಗಿರುವ ದರೋಡೆಕೋರರು, ಯಂತ್ರ ಧ್ವಂಸಗೊಳಿಸಿ 16.56 ಲಕ್ಷ ರೂ. ದರೋಡೆ ಮಾಡಿದ್ದಾರೆ. ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿಯ ಆಕ್ಸಿಸ್ ಬ್ಯಾಂಕ್ನ ಎಟಿಎಂ ಕೇಂದ್ರದಲ್ಲಿ ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ. ಕಾರಿನಲ್ಲಿ ಬಂದಿರುವ ದರೋಡೆಕೋರರು, ಮುಖಕ್ಕೆ ಇಬ್ಬರು ಬೆಡ್ಶೀಟ್ ಸುತ್ತಿಕೊಂಡು ಎಟಿಎಂ ಕೇಂದ್ರಕ್ಕೆ ನುಗ್ಗಿದ್ದಾರೆ. ಕೇಂದ್ರದಲ್ಲಿರುವ ಎರಡು ಸಿಸಿ ಕ್ಯಾಮರಾಗಳಿಗೆ ಕಪ್ಪು ಬಣ್ಣದ ಸ್ಪ್ರೇ ಸಿಂಪಡಿಸಿದ ಬಳಿಕ ಗ್ಯಾಸ್ ಕಟರ್ನಿಂದ ಕ್ಯಾಶ್ ಬಾಕ್ಸ್ ತೆರೆದು ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ.
ಪ್ರಾಥಮಿಕ ತನಿಖೆ ವೇಳೆ ಹರಿಯಾಣ ಅಥವಾ ಉತ್ತರ ಭಾರತ ಮೂಲದ ವ್ಯಕ್ತಿಗಳು ಕೃತ್ಯ ಎಸಗಿದ್ದಾರೆ ಎಂಬುದು ತಿಳಿದುಬಂದಿದೆ. ಕಾರಿನ ಮಾಹಿತಿ ಪತ್ತೆ ಹಚ್ಚಿದಾಗ, ಅದು ಕೂಡ ಕಳವು ಮಾಡಿರುವ ವಾಹನ ಎಂಬುದು ಗೊತ್ತಾಗಿದೆ. ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.