ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲಿ ಇಂತಹ ಹೀನ ಘಟನೆ ನಡೆಯುತ್ತದೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ದೇಶದ ಶೇ 50 ರಷ್ಟು ಜನಸಂಖ್ಯೆ ನಾವಿದ್ದೇವೆ. ನಮ್ಮನ್ನು ದೇವರ ಹೆಸರಿನಲ್ಲಿ ಪೂಜೆ ಮಾಡುತ್ತಾರೆ. ಹೆಣ್ಣು ದೇವರುಗಳಿಗೆ ಪೂಜೆ ಮಾಡುವುದು ಬೇಡ. ಗೌರವ, ರಕ್ಷಣೆ ಕೊಟ್ಟರೇ ಸಾಕು ಎಂದು ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ಅವರ ಈ ಹೀನ ಕೃತ್ಯಗಳ ಬಗ್ಗೆ ಬಿಜೆಪಿಯ ಅಧ್ಯಕ್ಷ ವಿಜಯೇಂದ್ರ, ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಈ ವಿಚಾರಗಳು ಗೊತಿದ್ದರೂ ಟಿಕೆಟ್ ನೀಡಿದ್ದಾರೆ. ನಾರಿಶಕ್ತಿ, ಮಹಿಳಾ ಸಮಾನತೆ ಎಂದು ಹೇಳುವ ಬಿಜೆಪಿಯವರೇ ನಿಮಗೆ ಮಹಿಳೆಯರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ವಿಜಯೇಂದ್ರ ಅವರೇ ನಿಮ್ಮ ಮನೆಯಲ್ಲಿ ಹೆಣ್ಣುಮಕ್ಕಳಿಲ್ಲವೇ?, ಶೋಭಕ್ಕ ಎಲ್ಲಿದ್ದೀರಿ? ಬಿಜೆಪಿ, ಜೆಡಿಎಸ್ ನಾಯಕರೇ ನಿಮಗೆ ಬಾಯಿ ಇಲ್ಲವೇ? ಸುಮಲತಾ ಅವರೇ ಏಕೆ ಮೌನವಾಗಿದ್ದೀರಿ. ದೇಶದ ಪ್ರತಿಯೊಬ್ಬ ನಾಗರೀಕನು ಈ ಕೃತ್ಯ ವಿರೋಧಿಸಿ ಛೀಮಾರಿ ಹಾಕುತ್ತಿದ್ದಾರೆ ಎಂದು ಸೌಮ್ಯ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.