ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗದವರು, ಪ್ರಸಕ್ತ ಸಾಲಿನ ಮೊದಲ ಹಾಗೂ ಎರಡನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು KSEEB ಮೂರನೇ ಅವಕಾಶ ನೀಡಿದ್ದು, ಎಸ್ಎಸ್ಎಲ್ಸಿ ಮೂರನೇ ಪರೀಕ್ಷೆಯ ನೋಂದಣಿಗೆ ಅವಕಾಶ ನೀಡಿದೆ. ಅದರಂತೆ ವಿದ್ಯಾರ್ಥಿಗಳು 2024ರ ಜುಲೈ 17ರೊಳಗಾಗಿ ಮೂರನೇ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಆಗಸ್ಟ್ 2ರಿಂದ 9ರವರೆಗೆ ಎಸ್ಎಸ್ಎಲ್ಸಿ ಮೂರನೇ ಪರೀಕ್ಷೆಯು ನಡೆಯಲಿದೆ. ಹಾಗಾಗಿ, ಜುಲೈ 10ರಿಂದಲೇ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜುಲೈ 17ರವರೆಗೆ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ. 2022-23ನೇ ಸಾಲಿನಲ್ಲಿಯೂ ಅನುತ್ತೀರ್ಣರಾದ, 2023-24ನೇ ಸಾಲಿನ ಮೊದಲ ಹಾಗೂ ದ್ವಿತೀಯ ಪರೀಕ್ಷೆಗೆ ಗೈರಾದವರು, ತೇರ್ಗಡೆ ಹೊಂದಲು ಸಾಧ್ಯವಾಗದವರು ಕೂಡ ಮೂರನೇ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇನ್ನು, ಕಳೆದ ಪರೀಕ್ಷೆಗಳಲ್ಲಿ ಪಡೆದ ಅಂಕಗಳಿಂದ ಸಮಾಧಾನಗೊಳ್ಳದವರು, ಇನ್ನೂ ಹೆಚ್ಚಿನ ಅಂಕ ಪಡೆಯಬೇಕು ಎನ್ನುವವರು ಕೂಡ ಮೂರನೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆ ಬರೆಯಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರು ಪರೀಕ್ಷೆ-3ಕ್ಕೆ ನೋಂದಣಿ ಮಾಡಿಕೊಳ್ಳಬಹುದು.