ಒದ್ದೆ ಕೈಯಲ್ಲಿ ಪೋನ್ಜಾರ್ಜ್ಗೆ ಹಾಕುವಾಗ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಬಸವೇಶ್ವರದಲ್ಲಿ ನಡೆದಿದೆ. ವೆಸ್ಟ್ ಆಫ್ ಕಾರ್ಡ್ ಪಿಜಿ ಯ ನಿವಾಸಿ ಶ್ರೀನಿವಾಸ್ ಮೃತಪಟ್ಟಿರುವ ವ್ಯಕ್ತಿ. ಬೀದರ್ ಮೂಲದ ಶ್ರೀನಿವಾಸ್ ಕಂಪ್ಯೂಟರ್ ಕೋರ್ಸ್ ವ್ಯಾಸಂಗ ಮಾಡಲು ಒಂದು ತಿಂಗಳ ಹಿಂದೆ ಬೆಂಗಳೂರಿಗೆ ಬಂದು, ಪಿ.ಜಿಯಲ್ಲಿ ನೆಲೆಸಿದ್ದ. ಶುಕ್ರವಾರ ರಾತ್ರಿ ಶೌಚಾಲಯಕ್ಕೆ ಹೋಗಿ ವಾಪಸ್ ಬಂದು ಒದ್ದೆ ಕೈಯಲ್ಲಿ ಮೊಬೈಲ್ ಚಾರ್ಜ್ಗೆ ಹಾಕಲು ಮುಂದಾಗಿದ್ದಾನೆ. ಈ ವೇಳೆ ವಿದ್ಯುತ್ ಪ್ರವಹಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೆಲ ಹೊತ್ತಿನ ಬಳಿಕ ಸ್ನೇಹಿತರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಶ್ರೀನಿವಾಸ್ನನ್ನು ಕಂಡು ಮುಟ್ಟಿ ಎಚ್ಚರಗೊಳಿಸಲು ಮುಂದಾಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಶಾಕ್ ಹೊಡೆದಿದೆ.
ಬಳಿಕ ರೂಮ್ನ ವಿದ್ಯುತ್ ಸ್ಥಗಿತಗೊಳಿಸಿ, ಕೂಡಲೇ ಶ್ರೀನಿವಾಸ್ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಶ್ರೀನಿವಾಸ್ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ತಜ್ಞರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕೆಲವು ಮಾದರಿಗಳನ್ನು ಸಂಗ್ರಹಿಸಿದೆ. ಶನಿವಾರ ಶ್ರೀನಿವಾಸ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.