- ಜುಲೈ 1 ರವರೆಗೆ ಸಿಐಡಿ ಕಸ್ಟಡಿಗೆ ಸೂರಜ್ ರೇವಣ್ಣ
- ಪ್ರಜ್ವಲ್ಗೆ ಜುಲೈ 8ರ ವರೆಗೆ ನ್ಯಾಯಾಂಗ ಬಂಧನ
ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ನಲ್ಲಿ ಮಾಜಿ ಸಚಿವ ಎಚ್ಡಿ ರೇವಣ್ಣ ಪುತ್ರರ ಅರ್ಜಿ ವಿಚಾರಣೆ ನಡೆದಿದೆ. ಸಲಿಂಗ ಕಾಮ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣನನ್ನು ಕೋರ್ಟ್, 8 ದಿನ ಸಿಐಡಿ ಕಸ್ಟಡಿಗೆ ನೀಡಿದೆ.
ಇನ್ನು ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣಗೆ ಸಿಐಡಿ ಕಸ್ಟಡಿಯಿಂದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಎರಡು ಪ್ರಕರಣಗಳ ಪ್ರತ್ಯೇಕವಾಗಿ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಅವರು ಅರ್ಜಿ ವಿಚಾರಣೆ ನಡೆಸಿದರು. ಸೂರಜ್ನನ್ನು ಜುಲೈ 1ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶ ನೀಡಿದ್ದರೆ, ಪ್ರಜ್ವಲ್ಗೆ ಜುಲೈ 8ರ ವರೆಗೆ ನ್ಯಾಯಾಂಗ ಬಂಧನ ನೀಡಿ ಆದೇಶ ಹೊರಡಿಸಿದರು.
ಸಲಿಂಗ ಕಾಮ, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸೂರಜ್ ರೇವಣ್ಣನನ್ನು ವಿಚಾರಣೆಗಾಗಿ ಹತ್ತು ದಿನ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ, ಕೋರ್ಟ್, 10 ದಿನ ಬದಲಾಗಿ 8 ದಿನ ಸಿಐಡಿ ಕಸ್ಟಡಿಗೆ ನೀಡಿದೆ. ಇದರಿಂದ ಜುಲೈ 1 ರವರೆಗೆ ಸೂರಜ್ ರೇವಣ್ಣ ಸಿಐಡಿ ಕಸ್ಟಡಿಯಲ್ಲಿ ಇರಲಿದ್ದಾರೆ.