- ರಾಜ್ಯ ಸರ್ಕಾರವು ಕಳೆದ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಸಾಧನ ಶೂನ್ಯ
- ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಜೊತೆ ಚೆಲ್ಲಾಟ ಆಡುತ್ತಿದೆ
- ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ ಕುಮಾರ್ ವಾಗ್ದಾಳಿ
ರಾಜ್ಯದ ಕಾಂಗ್ರೆಸ್ ಸರ್ಕಾರವು ಕಳೆದ ಒಂದು ವರ್ಷದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಸಾಧನ ಶೂನ್ಯ. ಈ ಸರಕಾರವು ವಿಶೇಷವಾಗಿ ಪದವಿ ತರಗತಿಗಳಲ್ಲಿ, ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳ ಭವಿಷ್ಯವನ್ನೇ ಹಾಳುಗೆಡುವುತ್ತಿದೆ. ನಮ್ಮಲ್ಲಿ ಸಿಬಿಎಸ್ಇ, ಐಸಿಎಸ್ಇ ಸೇರಿದಂತೆ ಕೇಂದ್ರ ಪಠ್ಯಕ್ರಮದ ಶಾಲೆಗಳು, ಜೊತೆಗೆ ಸ್ವಾಯತ್ತ ವಿಶ್ವವಿದ್ಯಾಲಯಗಳು ಇವೆ. ಆ ವಿದ್ಯಾರ್ಥಿಗಳಿಗೆ ಒಂದು ನೀತಿಯಾದರೆ, ಸರಕಾರಿ ಶಾಲೆಗೆ ಇನ್ನೊಂದು ನೀತಿ ಇದೆ. ಇದು ಇಬ್ಬಗೆಯ ನೀತಿ ಎಂದು ಕಿಡಿಕಾರಿದರು. ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟ, ಅವರ ಭವಿಷ್ಯವನ್ನೇ ಹಾಳು ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.
ಮಕ್ಕಳ ಆತಂಕ ನಿವಾರಣೆ, ವಿಷಾದ ವ್ಯಕ್ತಪಡಿಸುವುದು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಈ ಸರ್ಕಾರದ ಶಿಕ್ಷಣ ಸಚಿವರಿಂದ ಆಗಿಲ್ಲ ಎಂದ ಅವರು, ನಮ್ಮ ರಾಜ್ಯದ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಅತ್ಯಂತ ಚೆನ್ನಾಗಿದೆ ಎಂದು ಹಿಂದೆ ಹೆಸರು ಪಡೆದಿತ್ತು. ಇವತ್ತು ಸಿಇಟಿಯನ್ನು ಹಾಳುಗೆಡುವಿದ ಕೀರ್ತಿ ಈ ಸರಕಾರಕ್ಕೆ ಸಲ್ಲುತ್ತದೆ. ಸರ್ವರ್ ಡೌನ್ ಕಾರಣಕ್ಕೆ ಪ್ರವೇಶಪತ್ರ ಪಡೆಯಲು ವಿದ್ಯಾರ್ಥಿಗಳಿಗೆ ಆಗಲಿಲ್ಲ. ಅದೆಷ್ಟೋ ವಿದ್ಯಾರ್ಥಿಗಳು ನನಗೂ ಫೋನ್ ಮಾಡಿದ್ದು, ನಾನು ಸಚಿವರ ಗಮನಕ್ಕೆ ತಂದಿದ್ದೆ. ಅದಕ್ಕೆ ಲೆಕ್ಕವೇ ಇಲ್ಲ. ಪರೀಕ್ಷಾ ಅಕ್ರಮ ತಡೆ ನೆಪವೊಡ್ಡಿ ಒಂದು ಜಿಲ್ಲೆಯ ಹುಡುಗ ಇನ್ನೊಂದು ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವಂತೆ ಮಾಡಿದ್ದರು ಎಂದು ಆಕ್ಷೇಪ ಸೂಚಿಸಿದರು. ಮಕ್ಕಳ ಕನಸುಗಳಿಗೆ ಕಲ್ಲು ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ ಎಂದರು.