ನರ್ಸರಿ ಶಾಲೆಯ 50 ವರ್ಷದ ಶಿಕ್ಷಕಿಯೊಬ್ಬರು ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಡಿ ನಗರದ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೋಷಕರು ನೀಡಿದ ದೂರಿನನ್ವಯ ಕೆ.ಜಿ.ಹಳ್ಳಿಯ ವೆಂಕಟೇಶ್ವರಪುರದ ಅನ್ವರ್ ಲೇಔಟ್ ನಲ್ಲಿರುವ ಶಾಲೆಯ ಶಿಕ್ಷಕಿ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವೆಂಕಟೇಶ್ವರಪುರದ ಅನ್ವರ್ ಲೇಔಟಿನಲ್ಲಿರುವ ಖಾಸಗಿ ನರ್ಸರಿ ಶಾಲೆಗೆ ಬಾಲಕಿಯನ್ನು ದಾಖಲಿಸಿದ್ದೆವು. ಜೂ.6ರಿಂದ ಶಾಲೆಗೆ ಹೋಗಲಾರಂಭಿಸಿದ್ದಳು. 10 ದಿನಗಳ ಬಳಿಕ ಶಾಲೆಗೆ ಹೋಗುವುದಿಲ್ಲಾ ಎನ್ನಲು ಆರಂಭಿಸಿದ್ದಳು. ಏನಾಯಿತು ಎಂದು ಪೋಷಕರು ವಿಚಾರಿಸಿದಾಗ, ಖಾಸಗಿ ಅಂಗಗಳಲ್ಲಿ ನೋವಾಗಿರುವ ಬಗ್ಗೆ ಹೇಳಿದ್ದಾಳೆ. ಬಳಿಕ, ಶಿಕ್ಷಕಿಯ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ತಕ್ಷಣ ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೇವೆ’ ಎಂದು ಪೋಷಕರು ಕೆ.ಜಿ.ಹಳ್ಳಿ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಶಿಕ್ಷಕಿಯ ಹೆಸರು ಗೊತ್ತಿರದ ಬಾಲಕಿ ‘ಮ್ಯಾಮ್’ ಎಂದು ಪೋಷಕರ ಬಳಿ ಹೇಳಿದ್ದಾಳೆ ಎಂದು ತಿಳಿದು ಬಂದಿದೆ. ಈ ದೂರಿನನ್ವಯ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.