ಬೆಂಗಳೂರಿನ ವೈಯಾಲಿಕಾವಲ್ನಲ್ಲಿರುವ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಏಕೆಂದರೆ, ಬೆಂಗಳೂರಿಗೆ ಬರುತ್ತಿದ್ದ ಲಡ್ಡು ಪ್ರಸಾದವನ್ನು ಟಿಟಿಡಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ತಿರುಪತಿಯಲ್ಲಿ ಬ್ರಹ್ಮೋತ್ಸವ ಹಿನ್ನೆಲೆಯಲ್ಲಿ ತಿಮ್ಮಪ್ಪನ ಸನ್ನಿದಿಯಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ, ಬೆಟ್ಟದಿಂದ ಲಡ್ಡು ಪೂರೈಸುವ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಅಕ್ಟೋಬರ್ 12ರವರೆಗೆ ಬೆಂಗಳೂರಿನ ತಿರುಪತಿ ದೇವಸ್ಥಾನಕ್ಕೆ ಟಿಟಿಡಿ ಆಡಳಿತ ಮಂಡಳಿ ಲಡ್ಡು ಸರಬರಾಜು ಮಾಡುವುದಿಲ್ಲ.
ತಿರುಪತಿ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದವಾದ ಲಡ್ಡು ತಯಾರಿಕೆಗೆ ಕಳಪೆ ಗುಣಮಟ್ಟದ ತುಪ್ಪ ಬಳಸಲಾಗಿದೆ. ಆ ತುಪ್ಪದಲ್ಲಿ ಪ್ರಾಣಿಯ ಕೊಬ್ಬು, ಮೀನಿನ ಎಣ್ಣೆ ಮತ್ತಿತರ ಎಣ್ಣೆಗಳ ಅಂಶ ಇದ್ದುದು ಲ್ಯಾಬ್ ವರದಿಯಲ್ಲಿ ಪತ್ತೆಯಾಗಿತ್ತು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಹಿಂದೂಗಳ ಭಾವನಗೆ ದಕ್ಕೆ ಉಂಟು ಮಾಡಿದೆ.
ತಿರುಪತಿ ಲಡ್ಡು ಪಾವಿತ್ರ್ಯತೆಗೆ ಧಕ್ಕೆ ವಿವಾದದ ಬೆನ್ನಲ್ಲೇ ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ತಿರುಪತಿ ಲಡ್ಡು ವಿವಾದ ಮಧ್ಯೆಯೇ ಮತ್ತಷ್ಟು ನಂದಿನಿ ತುಪ್ಪ ಪೂರೈಸುವಂತೆ ಕೆಎಂಎಫ್ಗೆ ಟಿಟಿಡಿ ಮನವಿ ಮಾಡಿತ್ತು. ಅದರಂತೆ ಕೆಎಂಎಫ್ ಟಿಟಿಡಿಗೆ ಸೂಕ್ತ ಭದ್ರತೆಯೊಂದಿಗೆ ತುಪ್ಪ ಕಳುಹಿಸುತ್ತಿದೆ.
ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಬಳಸುವ ತುಪ್ಪ ಕಳಪೆ ಗುಣಮಟ್ಟದಿಂದ ಕೂಡಿದೆ. ಈ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕರ್ನಾಟಕದ ಅರ್ಚಕರು ತಿರುಪತಿ ಲಡ್ಡು ಪ್ರಸಾದವನ್ನು ಬಳಸದಂತೆ ನಿರ್ಧರಿಸಿದ್ದಾರೆ.