ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸದಾ ಟ್ರಾಫಿಕ್ ಜಾಮ್ ಸ್ಪಾಟ್ ಅಂದರೆ ಸಿಲ್ಕ್ ಬೋರ್ಡ್ ಜಂಕ್ಷನ್. ಈ ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಟ್ರಾಫಿಕ್ ಕಡಿಮೆ ಮಾಡಿ ವಾಹನಗಳ ಓಡಾಟಕ್ಕೆ ಅನಕೂಲ ಮಾಡಿಕೊಡಲು ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ನಿರ್ಮಾಣವಾಗಿರುವ ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ಉದ್ಘಾಟನೆಗೆ ಸಿದ್ಧಗೊಂಡಿದೆ. ಜೂನ್ ಕೊನೆಯಲ್ಲೇ ಎಲ್ಲ ಕೆಲಸಗಳು ಮುಗಿದಿದ್ದು, ಮೇಲ್ಸೇತುವೆ ಉದ್ಘಾಟನೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 3.36-ಕಿಮೀ ಉದ್ದದ ಈ ಫ್ಲೈಓವರ್ ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಪ್ರಾರಂಭವಾಗುತ್ತದೆ. ಮೇಟ್ರೊ ಹಳದಿ ರೇಖೆಯ ಕೆಳಗೆ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಸಾಗಿದೆ. ಸರ್ಕಾರ ಸೂಚನೆ ಕೊಟ್ಟರೆ ಉದ್ಘಾಟನೆಗೊಂಡು ಸಾರ್ವಜನಿಕರಿಗೆ ಮುಕ್ತವಾಗಲಿದೆ.
ಡಬಲ್ ಡೆಕ್ಕರ್ ಫ್ಲೈಓವರ್ ಕೆಳ ಭಾಗದಲ್ಲಿ ವಾಹನಗಳು ಸಂಚರಿಸಲಿವೆ. ಮೇಲಿನ ಭಾಗದಲ್ಲಿ ಮೆಟ್ರೋ ರೈಲು ಸಂಚರಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಹೆಚ್ಚುವರಿಯಾಗಿ, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಐದು ಲೂಪ್ಗಳು ಮತ್ತು ರ್ಯಾಂಪ್ಗಳನ್ನು ನಿರ್ಮಿಸಲಾಗುತ್ತಿದೆ. ಎ, ಬಿ, ಸಿ, ರ್ಯಾಂಪ್ಗಳ ಪ್ರಮುಖ ಕಾಮಗಾರಿ ಮುಕ್ತಾಯದ ಹಂತದಲ್ಲಿವೆ ಮತ್ತು ಜೂನ್ ಅಂತ್ಯದ ಒಳಗೆ ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಡಿ ಮತ್ತು ಇ ರ್ಯಾಂಪ್ಗಳು 2025 ರ ಜೂನ್ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.