- ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಏರಿದ ತರಕಾರಿ ಬೆಲೆ
- ನೂರು ರೂಪಾಯಿ ಗಡಿ ದಾಟಿದ ಟೊಮೊಟೊ ಬೆಲೆ
ರಾಜ್ಯದ ಜನರಿಗೆ ಬೆಲೆ ಏರಿಕೆಗಳ ಬಿಸಿ ಈಗಾಗಲೇ ತಟ್ಟಿದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆ ಮುಗಿಲು ಮುಟ್ಟಿದ್ದು, ಸಾಮಾನ್ಯ ಜನರು ತರಕಾರಿ ಖರೀದಿ ಮಾಡಲು ಯೋಚನೆ ಮಾಡುವಂತಾಗಿದೆ. ಇದೀಗ ಟೊಮೆಟೊ ಬೆಲೆ ನೂರು ರೂಪಾಯಿ ಗಡಿ ದಾಟಿದ್ದು, ಇನ್ನು ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ವ್ಯಾಪಾರಿಗಳಿಗೂ ನಷ್ಟ ಎದುರಿಸುವಂತಾಗಿದೆ.
ರಾಜ್ಯದಲ್ಲಿ ಮುಂಗಾರು ಮಳೆ ಶುರುವಾಗಿದ್ದು, ನೀರಿನ ಅಭಾವ ಕಮ್ಮಿ ಆಗಿದೆ. ಈ ಹಿಂದೆ ಕೋಲಾರ, ಹೊಸಕೋಟೆ, ನಾಸಿಕ್, ತಮಿಳುನಾಡು ಭಾಗದಿಂದ ಟೊಮೆಟೊ ಬರುತ್ತಿತ್ತಂತೆ. ಆದರೆ ಈಗ ನಾಸಿಕ್ ಬಿಟ್ಟರೆ ಬೇರೆ ಯಾವ ಭಾಗದಿಂದಲೂ ಬರುತ್ತಿಲ್ಲ. ಬೇಸಿಗೆಯಿಂದಾಗಿ ನೀರಿನ ಅಭಾವ ಜಾಸ್ತಿ ಇದ್ದರಿಂದ ಎಲ್ಲಿಯೂ ಸಹ ಸರಿಯಾದ ಬೆಳೆ ಬಂದಿಲ್ಲ. ಹೀಗಾಗಿ ತರಕಾರಿ ಬೆಲೆ ಏರಿದೆ. ಇನ್ನು ಟೊಮಾಟೊ ಬೇಡಿಕೆ ಹೆಚ್ಚಿದ್ದು ಮಾರುಕಟ್ಟೆಯಲ್ಲಿ ಅದರ ಬೆಲೆ 100 ರೂ. ಇದ್ರೆ, ಹಾಪ್ ಕಾಮ್ಸ್ಗಳಲ್ಲಿ 105 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಮುಂದೆ ಟೊಮೆಟೊ ಬೆಲೆ 150 ರೂ. ವರಗೆ ಹೆಚ್ಚಾಗುವ ಸಾಧ್ಯತೆ ಇದೆ.