ಮೀಡಿಯಾದವರು, ಸಾರ್ವಜನಿಕರು ಬೈದರೂ, ವಿರೋಧ ಪಕ್ಷದವರಾದರು ವಿರೋಧ ಮಾಡಿದರೂ ನಾವು ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಖಡಕ್ ಆಗಿಯೇ ಹೇಳಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ವೇಳೆ ನೀರು ಮತ್ತು ಪವರ್ ಈ ಎರಡು ಪ್ರಮುಖವಾಗಿದ್ದು, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ನೀರು ಸರಬರಾಜು ಖಾಸಗೀಕರಣ ಚರ್ಚೆ ನಡೆದಿತ್ತು. ನಮ್ಮ ರಾಜ್ಯದಲ್ಲಿ ಇದು ಕಷ್ಟವಾಗಲಿದೆ ಎಂದು ಮಾಹಿತಿ ನೀಡಿದ್ದೆ. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ನಂತರ ಯೋಜನೆ ಕೈ ಬಿಟ್ಟಿದ್ದೆವು. ಈಗ ನಾನು ಸಚಿವನಾದ ಮೇಲೆ ಮತ್ತೆ ಕೆಲವರು ಖಾಸಗೀಕರಣದ ಬಗ್ಗೆ ಬಂದು ಮಾತಾಡಿದ್ದರು. ನಾನು ಇದು ಆಗಲ್ಲ ಎಂದು ಹೇಳಿದ್ದೇನೆ ಎಂದಿದ್ದಾರೆ.
ನೀರಿನ ದರ ಹಲವು ವರ್ಷಗಳಿಂದ ಏರಿಸಿಲ್ಲ. ಬೆಂಗಳೂರಲ್ಲಿ 1.40 ಕೋಟಿ ಜನಸಂಖ್ಯೆ ಇದೆ. ಮೇಕೆದಾಟು ಯೋಜನೆ ಮೇಲೆ ನನಗೆ ಭರವಸೆ ಇದೆ. ಆದಷ್ಟು ಬೇಗ ಅದು ಆಗಲಿದೆ. ಶರಾವತಿ ಕುಡಿಯುವ ನೀರಿನ ಯೋಜನೆಯು ಇದೆ. ಅದಕ್ಕೆ ಆ ಭಾಗದಲ್ಲಿ ವಿರೋಧವಿದೆ. ಎತ್ತಿನ ಹೊಳೆ ಯೋಜನೆಯು ಒಂದು ಹಂತದಲ್ಲಿ ಇದೆ ಎಂದು ತಿಳಿಸಿದ್ದಾರೆ.