ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಗಾಗಿ ಪಬ್ಗೆ ತೆರಳಿದ್ದ ಯುವತಿಗೆ ಅಪರಿಚಿತ ಯುವಕನೊಬ್ಬ ಬ್ಯಾಡ್ ಟಚ್ ಮಾಡಿರುವ ಆರೋಪ ಕೇಳಿಬಂದಿದೆ.
ಹೊಸ ವರ್ಷ ಅಂದಮೇಲೆ ಪಬ್, ಡ್ರಿಂಕ್ಸ್, ಡ್ಯಾನ್ಸ್ ಎಲ್ಲ ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬ ಯುವಕ ಕುಡಿದ ಮತ್ತಲ್ಲಿ ಎಣ್ಣೆ ಜಾಸ್ತಿ ಆಗಿ ಬೇರೆ ಹುಡುಗಿಯನ್ನ ಟಚ್ ಮಾಡಿದ್ದಾನೆ. ಕಾಡುಬೀಸನಹಳ್ಳಿಯ ಸೋಷಿಯಲ್ ಪಬ್ನಲ್ಲಿ ಈ ಘಟನೆ ನಡೆದಿದೆ. ಯುವತಿ ನೀಡಿದ ದೂರಿನ ಮೇರೆಗೆ ಅಪರಿಚಿತ ಯುವಕನ ವಿರುದ್ಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಏನಿದು ಘಟನೆ?
ಹೊಸ ವರ್ಷದ ಪ್ರಯುಕ್ತ ಮಂಗಳವಾರ ತಡರಾತ್ರಿ ಯುವತಿ ತನ್ನ ಸ್ನೇಹಿತನೊಂದಿಗೆ ಕಾಡುಬೀಸನಹಳ್ಳಿಯ ಸೋಷಿಯಲ್ ಪಬ್ಗೆ ಬಂದಿದ್ದಳು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಯುವತಿಗೆ ಬ್ಯಾಡ್ ಟಚ್ ಮಾಡಿದ್ದಾನೆ. ಇದೇ ವೇಳೆ ಯುವತಿ ಪಬ್ನಲ್ಲೇ ಕಿರುಚಾಡಿದ್ದಾಳೆ. ಸರಿಯಾದ ಭದ್ರತೆ ಒದಗಿಸಿಲ್ಲ ಎಂದು ಪಬ್ ಸಿಬ್ಬಂದಿ ಮೇಲೂ ರಂಪಾಟ ಮಾಡಿದ್ದಾಳೆ. ಅಷ್ಟರಲ್ಲಿ ಯುವಕ ಕೂಡಲೇ ಸ್ಥಳದಿಂದ ಪರಾರಿ ಆಗಿದ್ದಾನೆಂದು ಮಾಹಿತಿ ತಿಳಿದು ಬಂದಿದೆ.
ನಂತರ ಯುವತಿ ಮಾರತ್ತಹಳ್ಳಿ ಠಾಣೆಗೆ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.ಘಟನೆಗೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಪೊಲೀಸರು ಪಬ್ ಡಿವಿಆರ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ನಿನ್ನೆ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಮತ್ತಿತರ ಕಡೆಗಳಲ್ಲಿ ಹೊಸ ವರ್ಷಾಚರಣೆ ಪಾರ್ಟಿ ಭರ್ಜರಿಯಾಗಿಯೇ ನಡೆದಿದೆ. ಕೋರಮಂಗಲದಲ್ಲಿ ಯುವಕ ಯುವತಿಯರು ಮದ್ಯದ ಮತ್ತಿನಲ್ಲಿ ತೂರಾಡಿದ್ದು ಕಂಡುಬಂತು. ಒಂದೆಡೆ ಎಣ್ಣೆಯ ಅಮಲಿನಿಂದ ಸುಸ್ತಾದ ಯುವತಿ ಕುಸಿದು ಕುಳಿತಿದ್ದರೆ, ಆಕೆಯನ್ನು ಎಬ್ಬಿಸಿ ಕರೆದೊಯ್ಯಲು ಆಕೆಯ ಬಾಯ್ಫ್ರೆಂಡ್ ಹರಸಾಹಸಪಡಬೇಕಾಯಿತು.
ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ನೂರಾರು ಕೋಟಿ ರುಪಾಯಿ ಆದಾಯ ಹರಿದು ಬಂದಿದೆ. ಡಿಸೆಂಬರ್ 31 ರ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಧ ದಿನದ ಅವಧಿಯಲ್ಲಿ ಕೆಎಸ್ಬಿಸಿಎಲ್ನಿಂದ ಬರೋಬ್ಬರಿ 308 ಕೋಟಿ ರುಪಾಯಿ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆಯ ನಿರೀಕ್ಷೆಗೂ ಮೀರಿ ಮಾರಾಟವಾಗಿದೆ.