ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಬಗ್ಗೆ ನಾಗರೀಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಆರ್.ಆರ್ ನಗರ ವಲಯ ಆಯುಕ್ತರಾದ ಸತೀಶ್ ರವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಆರ್.ಆರ್ ನಗರ ವಲಯದ ನಾಗರಬಾವಿ ವ್ಯಾಪ್ತಿಯಲ್ಲಿ ಬರುವ ಜೆಇಎಸ್ ಮಹಾವಿದ್ಯಾಲಯದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಯ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗೌರಿ ಗಣೇಶ ಹಬ್ಬದಲ್ಲಿ ರಾಸಾಯನಿಕ ಬಣ್ಣಗಳು, ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಓಪಿ) ವಸ್ತುಗಳನ್ನು ಬಳಸಿ ತಯಾರಿಸುವ ಗಣೇಶ ಮೂರ್ತಿಗಳನ್ನಿಟ್ಟು ಪೂಜಿಸುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ನಾವೇಲ್ಲರೂ ಮಣ್ಣಿನಿಂದ ತಯಾರಿಸಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರಸ್ನೇಹಿಯಾಗಿ ಹಬ್ಬವನ್ನು ಆಚರಿಸಬೇಕು. ಈ ನಿಟ್ಟಿನಲ್ಲಿ ನಾಗರೀಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ಕಲಿಕಾ ಶಿಬಿರದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಗಣೇಶ ಮೂರ್ತಿಗಳನ್ನು ತಮ್ಮ ಮನೆಗಳಿಗೆ ಕೊಂಡೊಯ್ದು ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಅರ್ಥಪೂರ್ಣವಾಗಿ ಆಚರಿಸಲು ಮನವಿ ಮಾಡಿದರು.
ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಜೆಇಎಸ್ ಶಾಲೆಯಲ್ಲಿ ಸುಮಾರು 160 ವಿದ್ಯಾರ್ಥಿಗಳು ಗಣೇಶ ಮೂರ್ತಿ ಕಲಿಕಾ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಪಾಲಿಕೆಯ ಕಲಾ ಶಿಕ್ಷಕರು ಹಾಗೂ ಚಿತ್ರಕಲಾ ಪರಿಷತ್ನ ಇಬ್ಬರು ವಿದ್ಯಾರ್ಥಿಗಳಿಗೆ ಗಣೇಶ ಮೂರ್ತಿ ತಯಾರಿಸುವುದನ್ನು ಹೇಳಿಕೊಟ್ಟರು.
ಈ ವೇಳೆ ವಲಯ ಜಂಟಿ ಆಯುಕ್ತರಾದ ಅಜಯ್, ಮುಖ್ಯ ಅಭಿಯಂತರರಾದ ಸ್ವಯಂಪ್ರಭಾ, ಶಾಲಾ ಪ್ರಾಂಶುಪಾಲರು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.