ಬಾಂಗ್ಲಾದೇಶದಲ್ಲಿ ನೊಬೆಲ್ ಪುರಸ್ಕೃತ ಮಹಮ್ಮದ್ ಯೂನುಸ್ ಸಾರಥ್ಯದಲ್ಲಿ ತಾತ್ಕಾಲಿಕ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಢಾಕಾದಲ್ಲಿ ಬಾಂಗ್ಲಾದ ಮುಖ್ಯಸ್ಥರಾಗಿ ಪ್ರೊ. ಮೊಹಮ್ಮದ್ ಯೂನಸ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ 15 ಸದಸ್ಯರ ಸಲಹಾ ಮಂಡಳಿಯೂ ಅಸ್ತಿತ್ವಕ್ಕೆ ಬಂದಿದೆ. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಬಾಂಗ್ಲಾದ ಮುಖ್ಯಸ್ಥರಿಗೆ ಪ್ರಧಾನಿ ಮೋದಿ ಶುಭಕೋರಿದ್ದಾರೆ.
ಈ ಕ್ಷಣಕ್ಕೆ ಬಿಎನ್ಪಿ ನಾಯಕಿ ಖಲಿದಾ ಜಿಯಾ, ಜಮಾತ್ ಎ ಇಸ್ಲಾಮಿ ನಾಯಕರು ಸಾಕ್ಷಿಯಾಗಿದ್ದಾರೆ. ಈ ಎಲ್ಲಾ ಬೆಳವಣಿಗೆ ಸೇನಾ ಮುಖ್ಯಸ್ಥರ ನಿಗಾದಲ್ಲಿಯೇ ನಡೆದಿದೆ ಎನ್ನುವುದು ಗಮನಾರ್ಹ. ಸದ್ಯ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಮುಂದಿನ ನಡೆ ಏನೆಂಬುದು ಇನ್ನೂ ಖಚಿತವಾಗಿಲ್ಲ. ಅವರು ಯುರೋಪ್ನಲ್ಲಿಯೂ ಆಶ್ರಯ ಕೋರಿದ್ದಾರೆ ಎನ್ನಲಾಗಿದೆ.