ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಯುಕೆ ರಾಜಾಶ್ರಯ ನೀಡಲು ಒಪ್ಪುವರೆಗೂ ಅವರಿಗೆ ಭಾರತ ಮಧ್ಯಂತರ ರಾಜಾಶ್ರಯ ನೀಡಲಿದೆ. ಸೋಮವಾರ ಸಂಜೆ ದೆಹಲಿಯಿಂದ 30 ಕಿ.ಮೀ ದೂರದಲ್ಲಿರುವ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿರುವ ಹಿಂಡನ್ ವಾಯುನೆಲೆಗೆ ಹಸೀನಾ ಬಂದಿಳಿದಿದ್ದಾರೆ. ಹಿಂಡನ್ ವಾಯುನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಶೇಖ್ ಹಸೀನಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಸದ್ಯ ಬಾಂಗ್ಲಾದೇಶ ಏರ್ಫೋರ್ಸ್ ಸಿ-130 ಮಿಲಿಟರಿ ಟ್ರಾನ್ಸ್ಪೋರ್ಟ್ ವಿಮಾನ ವಾಯುನೆಲೆಯಲ್ಲಿ ಲ್ಯಾಂಡ್ ಆಗಿದೆ. ಯಾವಾಗ ಶೇಖ್ ಹಸೀನಾ ಯುಕೆಗೆ ತೆರಳಲಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಇಂದು ಮಧ್ಯಾಹ್ನದ ನಂತರ ಯುಕೆಗೆ ಹೋಗಲಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರೆ ಇನ್ನೂ ರಾಜಾಶ್ರಯ ನೀಡುವ ಬಗ್ಗೆ ಯುಕೆ ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಯುಕೆ ಅನುಮತಿ ನೀಡುವವರೆಗೂ ಹಸೀನಾ ಭಾರತದಲ್ಲೇ ಇರಲಿದ್ದಾರೆ.
ಬಾಂಗ್ಲಾದೇಶದ ಪರಿಸ್ಥಿತಿಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದ್ದಾರೆ. ಮೋದಿ ಅವರು ಹಸೀನಾ ಅವರನ್ನು ಭೇಟಿ ಮಾಡುತ್ತಾರೆಯೇ ಎನ್ನುವುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಜೈಶಂಕರ್ ಅವರೊಂದಿಗೆ ಮಾತನಾಡಿದ್ದಾರೆ. ಸಂಸತ್ತಿನ ಹೊರಭಾಗದಲ್ಲಿ ಇಬ್ಬರೂ ಸಂಕ್ಷಿಪ್ತವಾಗಿ ಮಾತನಾಡಿದರು ಎಂದು ಕಾಂಗ್ರೆಸ್ ತಿಳಿಸಿದೆ.