ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದಿದ್ದು ರಾಜಕೀಯ ಅಸ್ಥಿರತೆ ಮನೆ ಮಾಡಿರುವ ವೇಳೆ ಏರ್ ಇಂಡಿಯಾ ವಿಶೇಷ ವಿಮಾನದಲ್ಲಿ 205 ಮಂದಿ ಭಾರತೀಯರನ್ನು ಬುಧವಾರ ಬೆಳಗ್ಗೆ ಢಾಕಾದಿಂದ ದೆಹಲಿಗೆ ಕರೆತಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ಬಾಂಗ್ಲಾದೇಶದ ರಾಜಧಾನಿಗೆ ಟೇಕ್ ಆಫ್ ಆದ ಚಾರ್ಟರ್ಡ್ ಫ್ಲೈಟ್ ಅನ್ನು A321 ನಿಯೋ ವಿಮಾನದಲ್ಲಿ ಕರೆತಲಾಗಿದೆ. ವಿಮಾನದಲ್ಲಿ 199 ವಯಸ್ಕರು ಮತ್ತು ಆರು ಶಿಶುಗಳನ್ನು ಢಾಕಾದಿಂದ ಮರಳಿ ಕರೆತಂದಿದ್ದು, ವಿಮಾನ ನಿಲ್ದಾಣದಲ್ಲಿ ಮೂಲಸೌಕರ್ಯ ಸವಾಲುಗಳ ನಡುವೆಯೂ ಯಾವುದೇ ಪ್ರಯಾಣಿಕರಿಲ್ಲದೆ ರಾಷ್ಟ್ರ ರಾಜಧಾನಿಯಿಂದ ಹಾರಿದ ವಿಮಾನವನ್ನು ಏರ್ ಇಂಡಿಯಾ ಬಹಳ ಕಡಿಮೆ ಸಮಯದಲ್ಲಿ ನಿರ್ವಹಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಧವಾರ ಏರ್ ಇಂಡಿಯಾ ತನ್ನ ನಿಗದಿತ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದು, ದೆಹಲಿಯಿಂದ ಢಾಕಾಗೆ ಎರಡು ದೈನಂದಿನ ವಿಮಾನಗಳು ಹಾರಾಟ ನಡೆಸಿವೆ. ಮಂಗಳವಾರ ಏರ್ ಇಂಡಿಯಾ ತನ್ನ ಬೆಳಗಿನ ವಿಮಾನವನ್ನು ರದ್ದುಗೊಳಿಸಿತ್ತು. ಆದರೆ ಸಂಜೆಯ ವಿಮಾನ ಢಾಕಾಗೆ ಹಾರಾಟ ನಡೆಸಿತ್ತು.
ವಿಸ್ತಾರಾ ಮತ್ತು ಇಂಡಿಗೋ ಸಹ ವೇಳಾಪಟ್ಟಿಯ ಪ್ರಕಾರ ಬಾಂಗ್ಲಾದೇಶದ ರಾಜಧಾನಿಗೆ ತಮ್ಮ ಸೇವೆಗಳನ್ನು ನಿರ್ವಹಿಸುತ್ತಿವೆ. ವಿಸ್ತಾರಾ ಮುಂಬೈನಿಂದ ದೈನಂದಿನ ವಿಮಾನಗಳನ್ನು ಮತ್ತು ದೆಹಲಿಯಿಂದ ಢಾಕಾಗೆ ಮೂರು ಸಾಪ್ತಾಹಿಕ ಸೇವೆಗಳನ್ನು ನಿರ್ವಹಿಸುತ್ತಿದೆ.