ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಬೈರಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮತ್ತೊಂದು ಟೋಲ್ ತಲೆ ಎತ್ತಿದೆ. ಸೋಮವಾರದಿಂದಲೇ ಸುಂಕ ವಸೂಲಿ ಆರಂಭಿಸುವುದಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಹಾಸನದಿಂದ ಮಾರನಹಳ್ಳಿವರೆಗೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆ ಕಾಮಗಾರಿ ಆರಂಭಗೊಂಡು 8 ವರ್ಷಗಳೇ ಕಳೆದಿವೆ. ಬರೊಬ್ಬರಿ ₹ 700 ಕೋಟಿ ವೆಚ್ಚದ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಆದರೆ ಕಾಮಗಾರಿ ಮುಗಿಯುವ ಮುನ್ನವೇ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಯಾರಿ ನಡೆಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸತತ ಏಳು ವರ್ಷಗಳಿಂದ ಹಾಸನದಿಂದ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದೆ. ಈವರೆಗೆ ಹಾಸನದಿಂದ ಸಕಲೇಶಪುರದ ವರೆಗೆ ಮಾತ್ರ ರಸ್ತೆ ಕಾಮಗಾರಿ ಮುಗಿದಿದೆ. 12 ಕಿಲೋ ಮೀಟರ್ ಕಾಮಗಾರಿ ಇನ್ನೂ ಮುಗಿದಿಲ್ಲ. ಜೊತೆಗೆ ಆಗಿರುವ ರಸ್ತೆ ಕಾಮಗಾರಿ ಕೂಡ ಅವೈಜ್ಞಾನಿಕ ಎಂಬ ಆರೋಪ ಕೇಳಿಬಂದಿದೆ. ಕೆಲವು ಕಡೆ ಫೈ ಓವರ್, ಸರ್ವಿಸ್ ರಸ್ತೆ ಕಾಮಗಾರಿಯೂ ಆಗಿಲ್ಲ. ಇನ್ನು ಕೆಲವೆಡೆ ರಸ್ತೆ ಕುಸಿಯುವ ಆತಂಕ ಇದೆ. ಇಷ್ಟೆಲ್ಲ ಅಧ್ಯಾನಗಳಿದ್ದರೂ ಸುಂಕ ವಸೂಲಿಗೆ ಹೆದ್ದಾರಿ ಪ್ರಾದಿಕಾರ ಅನುಮತಿ ನೀಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸೋಮವಾರದಿಂದ ಸುಂಕ ವಸೂಲಿಗೆ ಚಾಲನೆ ನೀಡಿದರೆ ತೀವ್ರ ಹೋರಾಟ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಹಾಸನ ಜಿಲ್ಲೆಯ ಶಾಂತಿಗ್ರಾಮದ ಬಳಿ ಒಂದು ಟೋಲ್ ಈಗಾಗಲೇ ಇದೆ. ಕೇವಲ 35 ಕಿಲೋಮೀಟರ್ ದೂರದಲ್ಲಿ ಮತ್ತೊಂದು ಟೋಲ್ ಮಾಡಲಾಗುತ್ತಿದೆ. ಎರಡು ಟೋಲ್ ಗಳ ನಡುವಿನ ಅಂತರ 60 ಕಿಲೋ ಮೀಟರ್ ಎಂದು ಕೇಂದ್ರ ಸಾರಿಗೆ ಸಚಿವರು ಹೇಳಿ ವರ್ಷಗಳೇ ಕಳೆದಿವೆ. ಆದರೂ ನಿಯಮ ಉಲ್ಲಂಘನೆ ಮಾಡಿ ಟೋಲ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.