ಕನ್ನಡದ ನೆಲ ಜಲ ಹಾಗೂ ಭಾಷೆ ವಿಚಾರ ಅಂತ ಬಂದಾಗ ಕನ್ನಡಪರ ಸಂಘಟನೆಗಳ ಕಾರ್ಯವು ಮಹತ್ತರವಾದದ್ದು. ಹುಕ್ಕೇರಿಯಲ್ಲಿ ಪರಭಾಷಾ ಪಲಕಗಳನ್ನು ಕೆಳಗಿಳಿಸುವ ಮೂಲಕ ಕನ್ನಡ ಡಿಂಡಿಮ ಬಾರಿಸುವ ಕಾರ್ಯಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಮುಂದಾಗಿದೆ.
ಹೌದು…ರಾಜ್ಯದಲ್ಲಿ ಹಿವವಾಟು ನಡೆಸುವ ಎಲ್ಲ ಸರ್ಕಾರಿ, ಸ್ವಾಯತ್ತ ಮತ್ತು ಖಾಸಗಿ ಸಂಸ್ಥೆಗಳು ನಾಮಪಲಕದಲ್ಲಿ ಶೇ 60 ರಷ್ಟು ಕನ್ನಡ ಬಳಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ ಕೆಲ ವ್ಯಾಪಾರಸ್ಥರು ಪರಭಾಷಾ ನಾಮಪಲಕಗಳನ್ನು ಅಳವಡಿಸಿ ತಮ್ಮ ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಮಹಾರಾಷ್ಟ್ರದ ಗಡಿಪ್ರದೇಶಕ್ಕೆ ಹೊಂದಿಕೊಂಡ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಕರವೇ ಕಾರ್ಯಕರ್ತರು ಸರ್ಕಾರದ ಆದೇಶ ಪಾಲನೆ ಮಾಡದ ಹಲವು ಮಳಿಗೆಗಳು, ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡವಿಲ್ಲದ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮಾಡಿದರು.
ಈ ವಿಚಾರಕ್ಕೆ ಸರ್ಕಾರದ ಆದೇಶ ಇದ್ರು ಅದಕ್ಕೆ ಕೇರ್ ಮಾಡದೇ ಹಲವು ಅಂಗಡಿಗಳು ಇಂಗ್ಲಿಷ್ ನಾಮಫಲಕವನ್ನೆ ಮುಂದುವರೆಸಿದ್ರು. ಇನ್ನು ಕೆಲವರು ಎಲ್ಲೋ ಮೂಲೆಯಲ್ಲಿ ಕನ್ನಡದಲ್ಲಿ ಹೆಸರು ಹಾಕಿ ಬೃಹತ್ ಗಾತ್ರದಲ್ಲಿ ಇಂಗ್ಲಿಷ್ ಭಾಷೆಯ ನಾಮಫಲಕ ಪ್ರದರ್ಶಿಸಿದ್ದರು. ಈ ಹಿಂದೆ ಹಲವು ಬಾರಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಗೂ ಪುರಸಭೆ ಅಧಿಕಾರಿಗಳು ನಾಮಫಲಕಗಳನ್ನು ತೆರವುಗೊಳಿಸಲು ಮನವಿ ಮಾಡಿದ್ರು ಸಹ ತೆರವುಗೊಳಿಸಿರಲಿಲ್ಲ. ಹೀಗಾಗಿ ಬೇರೆ ಭಾಷೆಗಳ ಫಲಕ ಹರಿದು ಅದರ ಮೇಲೆ ಕನ್ನಡ ಎಂದು ಬರೆದು ಕರವೇ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ರು.
ಇನ್ನು ವ್ಯಾಪಾರಸ್ಥರು ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ಸಹ ತರಾಟೆಗೆ ತೆಗೆದುಕೊಂಡು ಕನ್ನಡ ಬಳಸುವಂತೆ ಸೂಚನೆ ನೀಡಿದ್ರು. ಒಟ್ಟಿನಲ್ಲಿ ಕರ್ನಾಟಕದಲ್ಲಿ ಕನ್ನಡ ಬಳಸಿ ಎಂದು ಹೇಳುವಷ್ಟರ ಮಟ್ಟಿಗೆ ಕನ್ನಡದ ಅಸ್ಮಿತೆಯನ್ನು ಪ್ರಶ್ನಿಸುವಂತಿದೆ. ಕನ್ನಡಿಗರು ಕನ್ನಡ ಮೇಲಿನ ಪ್ರೇಮವನ್ನು ಬರೀ ಮಾತಿನಲ್ಲಿ ವ್ಯಕ್ತಪಡಿಸದೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಕನ್ನಡಿಗರಾದ ನಾವು ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡಿದ್ರೆ, ಬೇರೆ ಭಾಷೆಯ ಜನರು ಸಹ ಕನ್ನಡದ ಮೇಲೆ ಅಸಕ್ತಿ ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದರೆ ತಪ್ಪಾಗಲಾರದು.