ಗದಗ: ನಾನು ಅಧಿಕಾರದಲ್ಲಿದ್ದಾಗ ಸಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡದೇ ಪ್ರಾಮಾಣಿಕವಾಗಿ ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಿದ್ದೇನೆ. ಕೆಲವರು ನಲವತ್ತು ವರ್ಷಗಳಿಂದ ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುತ್ತಲೇ ಇದ್ದಾರೆ. ಅಧಿಕಾರದಲ್ಲಿದ್ದಾಗ ಯಾವ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಅವರು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಪರಸಾಪುರ ಗ್ರಾಮದಲ್ಲಿ ಆರ್ಯ ಈಡಿಗ ಸಂಘದ ವತಿಯಿಂದ ವತಿಯಿಂದ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತೋತ್ಸವ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಠಗಳು ಕೇವಲ ಧಾರ್ಮಿಕ ಕೇಂದ್ರವಾಗಿರದೇ ಶಿಕ್ಷಣ, ಆರೋಗ್ಯ ಮತ್ತು ಸ್ವಾವಲಂಬನೆ ಕೊಡುವ ಕೇಂದ್ರಗಳಾಗಿವೆ ಎಂದು ಪರಿಗಣಿಸಿ ನಾನು ಅಧಿಕಾರದಲ್ಲಿದ್ದಾಗ ಮಠಗಳಿಗೆ ಅನುದಾನ ಬಿಡುಗಡೆ ಮಾಡಿದ್ದೆ. ಮಠಗಳು ಶ್ರದ್ಧಾಕೇಂದ್ರಗಳು, ಅವು ಸನ್ಮಾರ್ಗ ತೋರಿಸಲಿ ಎಂದು ಅವುಗಳಿಗೆ ಸಹಾಯ ಮಾಡಿದ್ದೇವೆ. ಈಡಿಗ ಸಮಾಜ ಸೇಂಧಿ ತಯಾರು ಮಾಡುವ ಉದ್ಯೋಗ ನಿಂತು ಹೋದಾಗ ಆ ಸಮಾಜದ ಯುವಕರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸುವ ಕೆಲಸವನ್ನು ಅಂದಿನ ಸರ್ಕಾರ ಮಾಡಲಿಲ್ಲ. ಅವರಿಗೂ ಶಿಕ್ಷಣ ಕೊಡಿಸಿ ಉದ್ಯೋಗ ಕೊಡಿಸುವ ಕೆಲಸ ಮಾಡಬೇಕಿತ್ತು ಮಾಡಲಿಲ್ಲ. ಈಡಿಗ ಸಮಾಜದ ಯುವಕರು ಗಟ್ಟಿಗರಿದ್ದಾರೆ. ಹೀಗಾಗಿ ಸ್ವಯಂ ಉದ್ಯೋಗ ಮಾಡಿಕೊಂಡು ಬೆಳೆಯುತ್ತಿದ್ದಾರೆ. ಈ ಸಮಾಜದ ಪರಿಸ್ಥಿತಿ ಅರಿತು ನಾನು ನಿಗಮ ಸ್ಥಾಪನೆ ಮಾಡಿದ್ದೇನೆ. ಅದಕ್ಕೆ ಅನುದಾನ ನೀಡುವ ಕೆಲಸ ಮಾಡಬೇಕು. ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಕೂಡಲೇ ಅನುದಾನ ಬಿಡುಗಡೆ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸುವುದಾಗಿ ಹೇಳಿದರು.
ದೈವವೇ ದೇವರು, ಶರಣ ಬಸಪ್ಪನ ಸನ್ನಿಧಿಯಲ್ಲಿ ನಾರಾಯಣ ಗುರುಗಳ ಸ್ಮರಣೆಯಾಗುತ್ತಿರುವುದು ಸಾಮಾಜಿಕ ನ್ಯಾಯದ ಸಂಕೇತ, ಈಗ ಯಾರ ಬಳಿ ಜ್ಞಾನ ಇದೆಯೋ ಅವರು ಜಗತ್ತು ಆಳುತ್ತಾರೆ. ನೀವು ಜ್ಞಾನ ಪಡೆದು ಸ್ವಾಭಿಮಾನದ ಬದುಕು ಬದುಕಬೇಕು. ನಿಮ್ಮ ವಿಶ್ವಾಸಕ್ಕೆ ನಾನು ಚಿರರುಣಿಯಾಗಿದ್ದೇನೆ ಎಂದರು.
ಆಗಿನ ಕಾಲದಲ್ಲಿ ಯಾವುದೇ ಗ್ರಾಮದಲ್ಲಿ ಕೆಳ ಸಮುದಾಯಗಳ ಜನರನ್ನು ಬಿಡುತ್ತಿರಲಿಲ್ಲ. ನಾರಾಯಣ ಗುರೂಜಿಯವರು ಹೋರಾಟ ಮಾಡಿ, ಸಮಾಜದಲ್ಲಿ ಪರಿವರ್ತನೆ ತಂದು ದೊಡ್ಡ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಅದನ್ನು ನಾವು ಯಾರೂ ಮರೆಯಲು ಸಾಧ್ಯವಿಲ್ಲ. ದೇಶದಲ್ಲಿ ಇಷ್ಟು ದೊಡ್ಡ ಪರಂಪರೆ ಇದೆ ಎಂದರೆ, ನಾರಾಯಣ ಗುರೂಜಿಯಂತಹವರು ಕಾರಣ. ನಾರಾಯಣ ಗುರೂಜಿ ಪ್ರಭಾವ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಕೇರಳ ತಮಿಳುನಾಡಿಯಲ್ಲಿಯೂ ಇದೆ. ಆಗಿನ ಕಾಲದಲ್ಲಿ ಸಮಾನತೆಗೆ ಹೋರಾಟ ನಡೆಸುವುದು ಅಷ್ಟು ಸುಲಭವಾಗಿರಲಿಲ್ಲ. ಪ್ರಾಣದ ಹಂಗು ತೊರೆದು ಸಮಾಜ ಸುಧಾಕರು ಸಮಾನತೆಗಾಗಿ ಹೋರಾಟ ನಡೆಸಿದರು. ಈಗಿನ 21ನೇ ಶತಮಾನದಲ್ಲಿಯೂ ಅಲ್ಲಲ್ಲಿ ಅಸಮಾನತೆಯ ಮಾತುಗಳು ಕೇಳಿ ಬರುತ್ತಿವೆ. ನಾವು ಆರ್ಥಿಕವಾಗಿ ಸಾಮಾಜಿಕವಾಗಿ ಸುಧಾರಿಸಿದ್ದೇವೆ. ನಾವು ಮಮಾನವನ ಜೀವನದ ಮೌಲ್ಯವನ್ನು ಎತ್ತಿ ಹಿಡಿಯದಿದ್ದರೆ ಜೀವನ ಸಾರ್ಥಕತೆ ಪಡೆಯಲು ಸಾಧ್ಯವಿಲ್ಲ ಎಂದರು.
ನಾರಾಯಣ ಗುರೂಜಿ ದೇವ ಮಾನವರು
ಹುಟ್ಟು ಅಕಸ್ಮಿಕ ಅದು ನಮ್ಮ ಕೈಯಲ್ಲಿಲ್ಲ. ಸಾವು ನಮ್ಮ ಕೈಯಲ್ಲಿಲ್ಲ. ಅದರ ಬಗ್ಗೆ ಹೆಚ್ಚು ಚಿಂತನೆ ಮಾಡುತ್ತೇವೆ. ಬದುಕು ನಮ್ಮ ಕೈಯಲ್ಲಿದೆ. ನಾವು ಅದರ ಬಗ್ಗೆ ಚಿಂತನೆ ಮಾಡುವುದಿಲ್ಲ. ಎಲ್ಲರಿಗೂ ಪೀತಿ ವಿಶ್ವಾಸದಿಂದ, ಸಂತೋಷ, ಸಮಾಧಾನ ಸಮಾನತೆಯಿಂದ ಬದುಕಬೇಕೆಂಬ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ನಾವೆಲ್ಲರೂ ಮನುಷ್ಯರಾಗಿ ಹುಟ್ಟಿದ್ದೇವೆ. ಬಹಳಷ್ಟು ಜನರು ಮನುಷ್ಯರಾಗಿ ಹುಟ್ಟಿ ಮನುಷ್ಯರಾಗಿಯೇ ಸಾಯುತ್ತಾರೆ. ಕೆಲವೇ ಕೆಲವು ಜನರು ಮನುಷ್ಯರಾಗಿ ಹುಟ್ಟಿ ಮಾನವರಾಗುತ್ತಾರೆ. ಕಾಮ, ಕೋಧ, ಮದ, ಮತ್ಸರ, ತೊರೆದು ಅಹಿಂಸೆಯಿಂದ ನಡೆದವರು ಮಾನವರಾಗುತ್ತಾರೆ. ಕೇವಲ ತಾವು ಸನ್ಮಾರ್ಗದಲ್ಲಿ ನಡೆಯದೇ ಸಮಾಜವನ್ನು ಸನ್ನಡತೆಯಲ್ಲಿ ನಡೆಸುವವರು ದೇವ ಮಾನವರಾಗುತ್ತಾರೆ. ನಾರಾಯಣ ಗುರೂಜಿ ಆ ಸಾಲಿಗೆ ಸೇರಿದವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಸಿ. ಪಾಟೀಲ್, ಚಂದು ಲಮಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.