ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬುಲಾವ್ ಮೇರೆಗೆ ದೆಹಲಿಗೆ ಬಂದಿದ್ದೇನೆ. ಅವರು, ಮಹಾರಾಷ್ಟ್ರ ಜಾರ್ಖಂಡ್ ಸಂಸದೀಯ ಮಂಡಳಿ ಸಭೆ ನಡೆಸಿ ಬಳಿಕ ನಮ್ಮಗೆ ಸಮಯ ನೀಡಲಿದ್ದಾರೆ. ಅವರನ್ನು ಭೇಟಿಯಾಗಿ ಶಿಗ್ಗಾಂವಿ ಉಪ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದೇನೆ ಎಂದು ಹೇಳಿದರು.
ಶಿಗ್ಗಾಂವಿಯಲ್ಲಿ ಯಾರು ಅಭ್ಯರ್ಥಿ ಎನ್ನುವುದು ಯಾರು ಗೆಲ್ಲುತ್ತಾರೆ ಎನ್ನುವ ಆಧಾರದ ಮೇಲೆ ನಿರ್ಧಾರ ಆಗುತ್ತದೆ. ನಾಳೆಯ ಸಭೆಯಲ್ಲಿ ಎಲ್ಲವೂ ಚರ್ಚೆಯಾಗಲಿದೆ. ಶಿಗ್ಗಾಂವಿ, ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ಮಾಡಲಿದ್ದೇವೆ. ಇದೇ ಕಾರಣಕ್ಕೆ ಚರ್ಚಿಸಲು ಜೆ.ಪಿ ನಡ್ಡಾ ಅವರು ಕರೆದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಯಾವ ಪುರುಷಾರ್ಥಕ್ಕೆ ಅಧಿವೇಶನ? ಈರಣ್ಣಾ ಕಡಾಡಿ..!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಕಳೆದ ವರ್ಷ ಬರಗಾಲ ಬಿದ್ದಾಗ ರಾಜ್ಯ ಸರ್ಕಾರ ಯಾವುದೇ ರೀತಿಯ ಸಹಾಯ ಮಾಡಲಿಲ್ಲ. ಈ ವರ್ಷ ಪ್ರವಾಹ ಬಂದಿದೆ. ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಆಡಳಿತ ಪಕ್ಷದ ಶಾಸಕರೇ ಸರ್ಕಾದದ ವಿರುದ್ದ ಹೇಳಿಕೆಗಳನ್ನು ಕೊಟ್ಟಿರುವುದನ್ನು ನಾವು ಗಮನಿಸುತ್ತಿದ್ದೇವೆ. ಹಣಕಾಸಿನ ಪರಿಸ್ಥಿತಿ ಬಹಳ ಸೋಚನೀಯವಾಗಿದೆ. ಹಲವಾರು ಅಧಿಕಾರಿಗಳು ತಮ್ಮ ಅಸಹಾಯಕತೆಯನ್ನು ತೋರಿಸುತ್ತಿದ್ದಾರೆ. ಈ ಎಲ್ಲ ಹಿನ್ನೆಲೆಯ ಸಂದರ್ಭದಲ್ಲಿ ಉಪ ಚುನಾವಣೆಗಳು ನಡೆಯುತ್ತಿವೆ. ನಾವು ಒಂದು ರಾಷ್ಟ್ರೀಯ ಪಕ್ಷವಾಗಿ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಶಿಗ್ಗಾವಿ, ಸಂಡೂರು ಕ್ಷೇತ್ರಗಳನ್ನು ಬಿಜೆಪಿ ಅಭ್ಯರ್ಥಿಗಳು ಹಾಗೂ ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿಯನ್ನು ಗೆಲ್ಲಿಸಲು ನಾವು ಕಾರ್ಯತಂತ್ರ ರೂಪಿಸುತ್ತೇವೆ.
ಈ ಎಲ್ಲ ವಿಷಯಗಳ ಕುರಿತು ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು. ಶಿಗ್ಗಾಂವಿಯಲ್ಲಿ ಸ್ಥಳೀಯ ಮುಖಂಡರು ಭರತ್ ಬೊಮ್ಮಾಯಿಯವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿನ ಜನರು ಮತ್ತು ನಾಯಕರ ನಡುವೆ ಏನು ಮಾತುಕತೆಯಾಗಿದೆಯೊ ಗೊತ್ತಿಲ್ಲ. ಆದರೆ, ನಾನು ಇಷ್ಟು ವರ್ಷ ಅಲ್ಲಿ ಉತ್ತಮ ಕೆಲಸ ಮಾಡಿರುವುದರಿಂದ ಅಲ್ಲಿನ ಜನರು ನನ್ನ ಮಗನ ಹೆಸರು ಹೇಳಿರಬಹುದು. ಆದರೆ, ನಾನು ವೈಯಕ್ತಿಕ ಕಾರಣದಿಂದ ನನ್ನ ಮಗನಿಗೆ ಟಿಕೆಟ್ ಬೇಡ ಅಂತ ಹೇಳಿದ್ದೇನೆ. ಅದೆಲ್ಲ ವಿಷಯವೂ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರ ಜೊತೆಗೆ ಚರ್ಚೆಯಾಗಲಿದೆ ಎಂದು ಹೇಳಿದರು.