ಕನ್ನಡ ಕಿರುತೆರೆಯ ದೊಡ್ಡ ಶೋ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಮನೆಯಲ್ಲಿ ಉಳಿದ ಆರು ಸ್ಪರ್ಧಿಗಳಲ್ಲಿ ವಿನ್ನರ್ ಯಾರು ಆಗುತ್ತಾರೆ ಎಂದು ಪ್ರೇಕ್ಷಕರೆಲ್ಲಾ ಎದುರು ನೋಡುತ್ತಿದ್ದಾರೆ. ಶೋ ಎಲ್ಲ ಅಂದುಕೊಂಡಂತೆ ಯಶಸ್ವಿಯಾಗಿ ಸಾಗಿದೆ. ಇದರ ಜೊತೆ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಕೊನೆಯ ಬಿಗ್ಬಾಸ್ ಶೋ ಇದಾಗಿದೆ. 17 ವಾರ ಬಿಗ್ಬಾಸ್ ಕನ್ನಡಿಗರನ್ನು ರಂಜಿಸಿದೆ.
ಗ್ರ್ಯಾಂಡ್ ಫಿನಾಲೆ ಸಮಾರಂಭದ ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಯಾವ ಸ್ಪರ್ಧಿಯ ಕೈ ಮೇಲೆ ಎತ್ತುತ್ತಾರೋ ಆ ಸ್ಪರ್ಧಿ ವಿನ್ನರ್ ಆಗಲಿದ್ದಾರೆ. ಆ ಅದೃಷ್ಟವಂತ ಯಾರು ಎನ್ನುವುದೇ ಸದ್ಯದ ಕುತೂಹಲವಾಗಿದೆ. ಇದಕ್ಕಾಗಿ ಎರಡು ದಿನ ಅಂದರೆ ಜನವರಿ 25 ಹಾಗೂ 26 ರಂದು ಸಂಜೆ 6 ಗಂಟೆಗೆ ಬಿಗ್ಬಾಸ್ ಆರಂಭವಾಗಲಿದೆ. ಈ ವೇಳೆ ಸಾಕಷ್ಟು ಮನರಂಜನೆ ಕಾರ್ಯಕ್ರಮಗಳು ವೀಕ್ಷಕರಿಗೆ ಮನರಂಜನೆ ನೀಡಲಿವೆ.
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಬಂದೇ ಬಿಡ್ತು. ಒಂದು ದಿನ ಕಳೆದರೆ ಗ್ರ್ಯಾಂಡ್ ಫಿನಾಲೆ ಸಂಭ್ರಮ ಶುರು ಆಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಿದ್ಧತೆ ಆಗಿದೆ. ಶುಕ್ರವಾರವೇ ಗ್ರ್ಯಾಂಡ್ ಫಿನಾಲೆ ವೇದಿಕೆ ಸಜ್ಜಾಗಿದೆ. ಇದರ ಝಲಕ್ ಬಿಗ್ ಬಾಸ್ ಪ್ರೊಮೋದಲ್ಲಿಯೇ ರಿವೀಲ್ ಆಗಿದೆ.
ಹೆಚ್ಚು ಕಡಿಮೆ 120 ದಿನಗಳವರೆಗೂ ನಡೆದ ಈ ಒಂದು ಆಟದಲ್ಲಿ 17 ವಾರಗಳೇ ಕಳೆದಿವೆ. ಈ 17 ವಾರದ ಆಟಕ್ಕೆ ತೆರೆ ಬೀಳುತ್ತಿದೆ. ಮನೆ ಒಳಗೆ ಹೋದ ಸದಸ್ಯರಲ್ಲಿ ಕಡೆಯದಾಗಿ 6 ಜನ ಉಳಿದಿದ್ದಾರೆ. ಈ ಆರು ಜನರಲ್ಲಿ ಉಳಿದ ನಾಲ್ಕು ಜನರಲ್ಲಿ ಯಾರು ಮನೆಗೆ ಹೋಗುತ್ತಾರೆ. ವೇದಿಕೆ ಮೇಲೆ ಕಿಚ್ಚನ ಮುಂದೆ ನಿಲ್ಲುವವರು ಯಾರು? ಈ ಪ್ರಶ್ನೆ ಇದ್ದೇ ಇದೆ.
ಹನುಮಂತು:
ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಸ್ಪರ್ಧಿ. ತಮ್ಮ ಮುಗ್ಧತೆಯಿಂದಲೇ ಜನಪ್ರಿಯರಾಗಿದ್ದಾರೆ. ಟಿಕೆಟ್ ಟು ಫಿನಾಲೆ ಟಾಸ್ಕ್ನಲ್ಲಿ ಗೆದ್ದು, ಫಿನಾಲೆ ವಾರಕ್ಕೆ ಹೆಜ್ಜೆಯಿಟ್ಟ ಮೊದಲ ಸ್ಪರ್ಧಿ. ಮಾತು ಕಡಿಮೆ ಆದ್ರೂ, ಮಾತಿನಲ್ಲೊಂದು ತೂಕ ಇರುತ್ತೆ ಅನ್ನೋದು ನೋಡುಗರ ಅಭಿಪ್ರಾಯ. ಹಲವು ಬಾರಿ ನಿರೂಪಕ ಸುದೀಪ್ ಅವರ ಪ್ರಶಂಸೆಗೂ ಪಾತ್ರರಾಗಿ ಸದ್ದು ಮಾಡಿದ್ದಾರೆ. ಎಲ್ಲೂ ಮೋಸ ಮಾಡದೇ ಆಡುತ್ತಾ ಬಂದ ಇವರ ಆಟಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಧನರಾಜ್ ಆಚಾರ್ ಜೊತೆಗಿನ ನಿಷ್ಕಲ್ಮಶ ಸ್ನೇಹ ಈ ಬಿಗ್ ಬಾಸ್ ಪಯಣದಲ್ಲಿ ಸಖತ್ ಹೈಲೆಟ್ ಆಗಿದೆ ಅನ್ನಬಹುದು.
ಮೋಕ್ಷಿತಾ ಪೈ:
ಸೀಸನ್ 11ರ ಟಫೆಸ್ಟ್ ಕಂಟಸ್ಟೆಂಟ್. ಇಡೀ ಬಿಗ್ ಬಾಸ್ ಪಯಣದಲ್ಲಿ ಟಫ್ ಫೈಟರ್ ಆಗಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಬಹಳ ಶಾಂತಸ್ವರೂಪಿಯಾಗಿ, ಹೆಚ್ಚಾಗಿ ಮಂಜು ಮತ್ತು ಗೌತಮಿ ಜೊತೆಯೇ ಕಾಣಿಸಿಕೊಂಡ ಇವರು ಕೆಲವೇ ವಾರಗಳಲ್ಲಿ ಏಕಾಂಗಿಯಾಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಶುರು ಮಾಡಿದ್ರು. ಟಾಸ್ಕ್, ಮನರಂಜನೆ ಹೀಗೆ ಎಲ್ಲಾ ವಿಚಾರಗಳಲ್ಲೂ ಎತ್ತಿದ ಕೈ ಇವರದ್ದು. ಗೌತಮಿ ಮತ್ತು ಮಂಜು ಅವರ ಜೊತೆಗಿನ ಸ್ನೇಹ ಕನ್ನಡಿಗರ ಗಮನ ಸೆಳೆದಿದೆ. ಕೆಲವೇ ವಾರಗಳಲ್ಲಿ ಎಲಿಮಿನೇಷನ್ ಬಾಗಿಲಿನವರೆಗೂ ಹೋಗಿಬಂದ ಇವರು, ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟ ಮೊದಲ ಮೂರು ಸ್ಪರ್ಧಿಗಳಲೊಬ್ಬರಾದವರು.
ತ್ರಿವಿಕ್ರಮ್:
ಆರಂಭದಿಂದಲೂ ಟಫೆಸ್ಟ್ ಕಂಟಸ್ಟೆಂಟ್ ಎಂಬ ಕೀರ್ತಿಗೆ ಪಾತ್ರರಾದವರು. ಹೆಚ್ಚು ಮಾತನಾಡದೇ ಜನಪ್ರಿಯತೆ ಸಂಪಾದಿಸಿದವರು. ಆಟಕ್ಕೆ ನಿಂತ್ರೆ ಎದುರಾಳಿಗಳ ಎದೆಯಲ್ಲಿ ಭಯ ಹುಟ್ಟುತ್ತಿತ್ತು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿವೆ. ಭವ್ಯಾ ಜೊತೆಗಿನ ಸ್ನೇಹ ಕೂಡಾ ವ್ಯಾಪಕವಾಗಿ ಗಮನ ಸೆಳೆದಿದೆ. ವಿಜೇತರು ಯಾರಾಗಬಹುದು ಎಂಬ ಊಹೆಯಲ್ಲಿ ತ್ರಿವಿಕ್ರಮ್ ಮತ್ತು ಹನುಮಂತು ಅವರ ಹೆಸರು ಹೆಚ್ಚಾಗಿ ಕೇಳಿ ಬಂದಿದೆ.
ಉಗ್ರಂ ಮಂಜು:
ಆರಂಭದಲ್ಲೇ ಅಬ್ಬರಿಸಿದ ಸ್ಪರ್ಧಿ. ಬಿಗ್ ಬಾಸ್ಗೆ ಬೇಕಾದ ಎಲ್ಲಾ ಗುಣಗಳು ಇವರಲ್ಲಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಗ್ರೇ ಏರಿಯಾ ಮಾಸ್ಟರ್, ಸ್ಟ್ರ್ಯಾಟಜಿ ಕಿಂಗ್ ಎಂದೇ ಪಾಪ್ಯುಲರ್ ಆದ್ರು. ಗೌತಮಿ ಮತ್ತು ಮೋಕ್ಷಿತಾ ಜೊತೆಗಿನ ಸ್ನೇಹ ವ್ಯಾಪಕವಾಗಿ ಗಮನ ಸೆಳೆದಿದೆ. ಆದರೆ ಬರುಬರುತ್ತಾ ಮಂಜು ಮಂಕಾಗಿದ್ದು ಮಾತ್ರ ಅಭಿಮಾನಿಗಳಲ್ಲಿ ಕೊಂಚ ಬೇಸರ ತರಿಸಿತ್ತು. ಸುದೀಪ್ ಕೂಡಾ ಈ ಬಗ್ಗೆ ಬುದ್ಧಿವಾದ ಹೇಳಿದ್ದರು. ಟಾಸ್ಕ್, ಎಂಟರ್ಟೈನ್ಮೆಂಟ್ನಲ್ಲಿ ತಮ್ಮ ಕೈಲಾದಷ್ಟು ಕೊಟ್ಟ ಮಂಜು ಟಾಪ್ ಸ್ಪರ್ಧಿ ಆಗ್ತಾರಾ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.
ಭವ್ಯಾ ಗೌಡ:
ತಮ್ಮ ಆಟ, ಆ್ಯಟಿಟ್ಯೂಡ್ನಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಟಾಸ್ಕ್ಗಳಲ್ಲಿ ಹಂಡ್ರೆಡ್ ಪರ್ಸೆಂಟ್ ಎಫರ್ಟ್ ಹಾಕೋ ಮೂಲಕ ಟಫೆಸ್ಟ್ ಕಂಟಸ್ಟೆಂಟ್ ಅಂತಾ ಗುರುತಿಸಿಕೊಂಡರು. ಕಳೆದ ಎರಡ್ಮೂರು ವಾರಗಳಲ್ಲಿ ಎಲಿಮಿನೇಟ್ ಆಗ್ತಾರಾ ಅನ್ನೋ ಪ್ರಶ್ನೆ ಎದ್ದಿತ್ತು. ಆದರೆ ಅಂತಿಮವಾಗಿ ಫಿನಾಲೆ ವಾರ ತಲುಪೋ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ತರಿಸಿದ್ದಾರೆ.
ರಜತ್ ಕಿಶನ್:
ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆ ಪ್ರವೇಶಿಸಿ ದೊಡ್ಡ ಮಟ್ಟಿಗೆ ಸದ್ದು ಮಾಡಿದವರು. ಇವರ ಆರ್ಭಟ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತಾದರೂ, ಟಫೆಸ್ಟ್ ಕಂಟಸ್ಟೆಂಟ್ ಎಂಬ ಜನಪ್ರಿಯತೆ ಗಳಿಸಿದ್ದಾರೆ. ಬಿಗ್ ಬಾಸ್ ತನ್ನ 50ನೇ ದಿನದಲ್ಲಿದ್ದ ಸಂದರ್ಭ ಶೋಭಾ ಶೆಟ್ಟಿ ಜೊತೆ ಮನೆ ಪ್ರವೇಶಿಸಿದ ರಜತ್ ಕಿಶನ್ ಟಾಸ್ಕ್ ಮತ್ತು ತಮ್ಮ ನೇರನುಡಿ ಮೂಲಕ ಕನ್ನಡಿಗರ ಗಮನ ಸೆಳೆದಿದ್ದಾರೆ.
ಈ 6 ಮಂದಿ ಕೂಡಾ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಗೆಲುವು ಯಾರಿಗೆ ಅನ್ನೋ ಕುತೂಹಲ ಹೆಚ್ಚಾಗುತ್ತಲೇ ಇದೆ. ಹೆಚ್ಚಿನ ವೋಟ್ ಯಾರಿಗೆ ಬರುತ್ತಾವೋ ಅವರೇ ವಿನ್ನರ್ ಎಂದು ಘೋಷಣೆ ಮಾಡಲಾಗುತ್ತದೆ. ಮತದಾರರು ಯಾರ ಕಡೆ ಒಲವು ತೋರಿದ್ದಾರೆ ಎಂದು ಕಾದು ನೋಡಬೇಕಿದೆ. ಸ್ಪರ್ಧಿಗಳಿಗೆ ತಾವು ಆಡಿದ ಆಟದ ಜೊತೆಗೆ ಕೊಂಚ ಅದೃಷ್ಟನೂ ಕೈ ಹಿಡಿಯಬೇಕಿದೆ. ಒಟ್ಟಾರೆ, ದೊಡ್ಮನೆಯಲ್ಲಿ ಎರಡು ದಿನ ಗ್ರ್ಯಾಂಡ್ ಫಿನಾಲೆ ಪ್ಲಾನ್ ಆಗಿದೆ. ಸಂಜೆ ೬ ಗಂಟೆಗೇನೆ ಎರಡೂ ದಿನ ಪ್ರಸಾರ ಆಗುತ್ತದೆ ಅಂತಲೇ ಹೇಳಬಹುದು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ:https://chat.whatsapp.com/HWayJDSBf9aI06q6jplPgc