ಆಸ್ತಿ ತೆರಿಗೆ ಸುಸ್ತಿದಾರರಿಗಾಗಿ ಜಾರಿಗೊಳಿಸಲಾಗಿದ್ದ ಒಂದು ಬಾರಿ ಪರಿಹಾರ ಯೋಜನೆಯ ಅಂತಿಮ ದಿನವನ್ನು ಸೆ.30ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಆಸ್ತಿ ತೆರಿಗೆ ಸುಸ್ತಿದಾರರು ಒಂದೇ ಬಾರಿಗೆ ತಮ್ಮ ಬಾಕಿ ತೆರಿಗೆ ಮೊತ್ತ ಪಾವತಿಸಿದರೆ ಶೇ.50ರಷ್ಟು ದಂಡ ಹಾಗೂ ಶೇ.100ರಷ್ಟು ಬಡ್ಡಿ ಮನ್ನಾ ಮಾಡುವ ಒಟಿಎಸ್ ಯೋಜನೆಯನ್ನು ಬಿಬಿಎಂಪಿ ಚಾಲನೆ ನೀಡಿತ್ತು. ಅದರಂತೆ ಒಟಿಎಸ್ ಅವಧಿಯನ್ನು ಜುಲೈ 31ಕ್ಕೆ ಅಂತಿಮ ದಿನವಾಗಿಸಿ, ಅಷ್ಟರೊಳಗೆ ಬಾಕಿ ತೆರಿಗೆ ಪಾವತಿಸುವಂತೆ ಸೂಚಿಸಲಾಗಿತ್ತು.
ಅದರ ಪ್ರಕಾರ ಒಟಿಎಸ್ ಅಡಿಯಲ್ಲಿ 4.11 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳಿಂದ 956.09 ಕೋಟಿ ತೆರಿಗೆ ವಸೂಲಿ ಯಾಗಬೇಕಿತ್ತು. ಆದರೆ, ಅವಕಾಶ ನೀಡಿದ ಅವಧಿಯಲ್ಲಿ ಕೇವಲ 1.14 ಲಕ್ಷ ಆಸ್ತಿಗಳಿಂದ 380 ಕೋಟಿ ಬಾಕಿ ತೆರಿಗೆ ವಸೂಲಿಯಾಗಿತ್ತು. ಇನ್ನೂ 3.04 ಲಕ್ಷ ಆಸ್ತಿಗಳಿಂದ 831.53 ಕೋಟಿ ಬಾಕಿ ತೆರಿಗೆ ಪಾವತಿಸಬೇಕಿದೆ. ಅಲ್ಲದೆ, ಒಟಿಎಸ್ ಅವಧಿ ವಿಸ್ತರಿಸುವಂತೆ ವಿವಿಧ ಸಂಘಟನೆಗಳು, ತೆರಿಗೆ ಬಾಕಿದಾರರು ಬಿಬಿಎಂಪಿ ಮತ್ತು ಸರ್ಕಾರವನ್ನು ಮನವಿ ಮಾಡಿದ್ದರು. ಅದಕ್ಕೆ ಪೂರಕವಾಗಿ ಸೆಪ್ಟೆಂಬರ್ 30ರವರೆಗೆ ಒಟಿಎಸ್ ಅವಧಿ ವಿಸ್ತರಿಸುವ ಕುರಿತು ಬಿಬಿಎಂಪಿ ಯಿಂದ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು. ಅದನ್ನು ಪುರಸ್ಕರಿಸಿರುವ ಸರ್ಕಾರ ಒಟಿಎಸ್ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ಗುರುವಾರ ಆದೇಶಿಸಿದೆ.