ಬಿಬಿಎಂಪಿಯು ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳನ್ನು ಬಿಟ್ಟು ಇವಿ ಕಾರುಗಳ ಮೊರೆ ಹೋಗುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಇವಿ ಕಾರು- ಬೈಕ್ನ ಬಳಕೆ ಹೆಚ್ಚಾಗುತ್ತಿದೆ. ಬಿಬಿಎಂಪಿಯೂ ಸಹ ಇದೀಗ ಇವಿ ಕಾರು ಖರೀದಿಗೆ ಮುಂದಾಗಿದ್ದು, ಬಿಬಿಎಂಪಿಯ ಕೇಂದ್ರ ಕಚೇರಿ ಆವರಣದಲ್ಲಿ ಟಾಟಾ ನೆಕ್ಸನ್ ಇವಿ ಕಾರು ಪರಿಶೀಲನೆ ಸಹ ಇತ್ತೀಚೆಗೆ ನಡೆಸಲಾಗಿದೆ.
ಸುಮಾರು 20 ಲಕ್ಷ ಬೆಲೆ ಕಾರಾಗಿದ್ದು, ಪ್ರತಿ ಚಾರ್ಜ್ಗೆ ನಗರ ಪ್ರದೇಶದಲ್ಲಿ ಸುಮಾರು 350 ರಿಂದ 400 ಕಿ.ಮೀ ಮೈಲೇಜ್ ನೀಡಲಿದೆ. ರೂಫ್ ಟಾಪ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಈ ಕಾರು ಹೊಂದಿದೆ. ಸದ್ಯಕ್ಕೆ ಒಂದು ಕಾರು ಖರೀದಿ ಮಾಡಿ ಪರಿಶೀಲಿಸಲು ಬಿಬಿಎಂಪಿ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ. ಇವಿ ಕಾರು ಹಾಗೂ ಸದ್ಯ ಖರೀದಿ ಮಾಡಲಾಗುತ್ತಿರುವ ಪೆಟ್ರೋಲ್ ಮತ್ತು ಡಿಸೇಲ್ ಕಾರು ಬೆಲೆ ಬಹುತೇಕ ಒಂದೇ ಆಗಿದೆ. ಆದರೆ, ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳಿಗೆ ಇಂಧನ ವೆಚ್ಚ ಮಾಡಬೇಕಾಗಲಿದೆ.
ಇವಿ ಕಾರುಗಳ ಚಾರ್ಜ್ಗೆ ಬಳಕೆಯಾಗುವ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಲಿದೆ. ಇವಿ ಕಾರು ಖರೀದಿ ಮಾಡುವುದರಿಂದ ಇಂಧನ ವೆಚ್ಚದಲ್ಲಿ ಸ್ವಲ್ಪ ಪ್ರಮಾಣ ಉಳಿತಾಯ ಮಾಡಬಹುದು. ಏಕಾಏಕಿ ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳನ್ನು ತೆಗೆದು ಇವಿ ಕಾರು ಖರೀದಿ ಮಾಡುವುದಿಲ್ಲ. ಇವಿ ಕಾರು ಸೂಕ್ತ ಎನಿಸಿದರೆ ಹಂತ ಹಂತವಾಗಿ ಖರೀದಿ ಮಾಡಲಾಗುವುದು ಎಂದು ಬಿಬಿಎಂಪಿ ಸಾರಿಗೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.