ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 8 ಕೆರೆಗಳಲ್ಲಿ ಇಂದು ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಹಂತ-ಹಂತವಾಗಿ ಎಲ್ಲಾ ಕೆರೆಗಳಲ್ಲೂ ಸ್ವಚ್ಛತಾ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ವಿಶೇಷ ಆಯುಕ್ತರಾದ(ಅ.ಪ.ಹ.ವೈ) ಶ್ರೀಮತಿ ಪ್ರೀತಿ ಗೆಹ್ಲೋಟ್ ರವರು ಅಧಿಕಾರಿಗಳಿಗೆ ಸೂಚಿಸಿರುತ್ತಾರೆ. ಬಿಬಿಎಂಪಿಯ ವ್ಯಾಪ್ತಿಯ ಎಲ್ಲಾ ವಲಯಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು ಸ್ವಚ್ಛತಾ ಕಾರ್ಯವನ್ನು ನಡೆಸಲಾಗುತ್ತಿದ್ದು, ಅಮೃತಹಳ್ಳಿ, ಕೌದೇನಹಳ್ಳಿ ಹಾಗೂ ಕೆಳಗಿನ ಭೈರಸಂದ್ರ ಕೆರೆಗಳಿಗೆ ಖುದ್ದು ಭೇಟಿ ನೀಡಿ, ಸ್ವಚ್ಛತಾ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ಅಧಿಕಾರಿಗಳಿಗೆ ಸೂಚೆನೆ ನೀಡಿದ್ದಾರೆ.
ಎಲ್ಲಾ ಕರೆಗಳಲ್ಲಿ ಬರುವ ಕರೆಯ ಅಂಗಳದ ಪಾದಚಾರಿ ಮಾರ್ಗದಲ್ಲಿ ಸ್ವಚ್ಛತೆ, ಕೆರೆ ಏರಿಯಾದಲ್ಲಿ ಕಳೆ ತೆಗೆಯುವುದು, ಕೆರೆ ನೀರಿನಲ್ಲಿ ಜೊಂಡು ತೆಗೆಯುವುದು, ಒಳಹರಿವು ಸ್ವಚ್ಛತೆಗೊಳಿಸುವ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ಸ್ವಚ್ಛತಾ ಅಭಿಯಾನವು ಈ ವಾರ ಪೂರ್ತಿ ನಡೆಯಲಿದ್ದು, ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಸರಿಯಾಗಿ ಸ್ವಚ್ಛತೆ ಮಾಡಲು ಸೂಚಿಸಿದರು.
8 ಕರೆಗಳಲ್ಲಿ ಸ್ವಚ್ಛತೆ:
ಪಾಲಿಕೆ ವ್ಯಾಪ್ತಿಯಲ್ಲಿ ಬರುವ 8 ವಲಯಗಳಲ್ಲೂ ಒಂದೊಂದು ಕೆರೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಅದರಂತೆ ಇಂದು ಕೆಳಗಿನ ಬೈರಸಂದ್ರ, ನಾಯಂಡನಹಳ್ಳಿ, ಗೌಡನಪಾಳ್ಯ, ಕೌದೇನಹಳ್ಳಿ, ದೊರೆಕೆರೆ, ಅಗರ, ಅಮೃತಹಳ್ಳಿ, ಚೊಕ್ಕಸಂದ್ರ ಹಾಗೂ ಉಲ್ಲಾಳ ಕರೆ ಸೇರಿದಂತೆ 8 ಕೆರೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಗಿದೆ. ಅದಕ್ಕಾಗಿ 175 ಸಿಬ್ಬಂದಿ, 13 ಟ್ರ್ಯಾಕ್ಟರ್ ಹಾಗೂ 4 ಜೆ.ಸಿ.ಬಿಗಳನ್ನು ಬಳಸಿಕೊಳ್ಳಲಾಗಿದೆ.