ಪ್ರೀಮಿಯಂ, ಸೆಮಿ ಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ಬಿಯರ್ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದ್ದು ಶೀಘ್ರದಲ್ಲೇ ಹೊಸ ದರಗಳು ಅನ್ವಯವಾಗಲಿವೆ. ಬಿಯರ್ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರ ಆಗಸ್ಟ್ 23 ರಂದೇ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸಿ 15 ದಿನ ಕಾಲಾವಕಾಶ ನೀಡಿತ್ತು. ಹೀಗಾಗಿ ಶೀಘ್ರದಲ್ಲೇ ಬೆಲೆ ಹೆಚ್ಚಳಕ್ಕೆ ಅಸ್ತು ಎಂದಿದ್ದು, 10 ರುಪಾಯಿಗಿಂತಲೂ ಹೆಚ್ಚು ದುಬಾರಿಯಾಗಲಿದೆ.
ಇದರಿಂದಾಗಿ ಕಳೆದ ಒಂದೂವರೆ ವರ್ಷದಲ್ಲೇ ಮೂರು ಬಾರಿ ದರ ಹೆಚ್ಚಳದ ಶಾಕ್ ಬಿಯರ್ ಪ್ರಿಯರು ಅನುಭವಿಸುವಂತಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಸ್ಲ್ಯಾಬ್ನಲ್ಲಿ ಮಾತ್ರ ಬಿಯರ್ ಮಾರಾಟ ಮಾಡಲಾಗುತ್ತಿತ್ತು. ಇದೀಗ ಅದ ನ್ನು ಆಲೋಹಾಲ್ ಪ್ರಮಾಣಕ್ಕನುಗುಣವಾಗಿ ಮೂರು ಸ್ಲ್ಯಾಬ್ ಮಾಡಿ ಪ್ರತಿ ಸ್ಲ್ಯಾಬ್ನ ದರ ಹೆಚ್ಚಳ ಮಾಡಲಾಗುತ್ತದೆ. ಶೇ.5 ರವರೆಗೂ ಆಲ್ಕೋಹಾಲ್ ಅಂಶ ಇರುವ ಬಿಯರ್, ಶೇ.5 ರಿಂದ 6.5 ಹಾಗೂ ಶೇ.6.5 ರಿಂದ 8 ರವರೆಗೂ ಆಲ್ಕೋಹಾಲ್ ಇರುವ ಮೂರು ಸ್ಲ್ಯಾಬ್ಗಳನ್ನು ವಿಂಗಡಿಸಿ ದರ ಹೆಚ್ಚಳ ಮಾಡಲಾಗುತ್ತದೆ.