ಬೆಳಗಾವಿ: ತಾಯಿ ಆಸೆ ಈಡೇರಿಸಲು ಹೋಗಿ ಮಗ ಜೈಲು ಸೇರಿರುವ ಘಟನೆ ನಡೆದಿದೆ. ಬೆಳಗಾವಿಯ ಜ್ಯೋತಿ ನಗರದ ನಿವಾಸಿ ಕೃಷ್ಣಾ ಸುರೇಶ ದೇಸಾಯಿ(23) ಜೈಲು ಪಾಲದ ಯುವಕ.
ಕಳೆದ ಎರಡು ದಿನಗಳ ಹಿಂದೆ ಕೋರ್ಟ್ ಎದುರಿನ HDFC ಬ್ಯಾಂಕ್ನ ಎಟಿಎಂನಲ್ಲಿದ್ದ ಹಣ ಕಳ್ಳತನವಾಗಿತ್ತು. ಸುಮಾರು 8.65 ಲಕ್ಷ ರೂಪಾಯಿ ಕಳ್ಳತನವಾಗಿತ್ತು. ಈ ವಿಚಾರ ಬೆಳಕಿಗೆ ಬರ್ತಿದ್ದಂತೆ ಬ್ಯಾಂಕ್ ಸಿಬ್ಬಂದಿ ಪೊಲೀಸ್ ಕೇಸ್ ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದ್ದಾರೆ. ಈ ವೇಳೆ ಎಟಿಎಂ ಗೆ ಬರೋದು ಹಾಗೂ ಎಟಿಎಂನಲ್ಲಿದ್ದ ಹಣ ಕದ್ದುಕೊಂಡು ಹೋಗಿರುವ ದೃಶ್ಯ ಸೆರೆಯಾಗಿತ್ತು.
ಈ ಪ್ರಕರಣದ ಬಗ್ಗೆ ಯಾರೆಂದು ವಿಚಾರಿಸಿದಾಗ ಕೃಷ್ಣ ಸುರೇಶ್ ದೇಸಾಯಿ ಅನ್ನೋದು ದೃಢವಾಗಿತ್ತು. ಕೊನೆಗೆ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಂಧನದ ಬಳಿ ಪೊಲೀಸರಿಗೆ ಗೊತ್ತಾಗಿರೋ ವಿಚಾರ ಏನೆಂದರೆ ಕೃಷ್ಣ ಸುರೇಶ್ ದೇಸಾಯಿ ಎಚ್ಡಿಎಫ್ಪಿ ಬ್ಯಾಂಕ್ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಿದ್ದ. ಎಚ್ಡಿಎಫ್ಸಿ ಬ್ಯಾಂಕ್ನ ಎಟಿಎಂ ಕಸ್ಟೋಡಿಯನ್ ಆಗಿ ಕೆಲಸ ಮಾಡ್ತಿದ್ದ. ನಿತ್ಯ ಬ್ಯಾಂಕಿನಿಂದ ಹಣ ತಂದು ನಗರದ ಎಲ್ಲಾ ಹೆಚ್ಡಿಎಫ್ಸಿ ಎಟಿಎಂಗೆ ಹಣ ಹಾಕ್ತಿದ್ದ. ಅಂತೆಯೇ ಎರಡು ದಿನಗಳ ಹಿಂದೆ ಎಚ್ಡಿಎಫ್ಸಿ ಎಟಿಎಂನಲ್ಲಿ ಹಣ ಹಾಕಿ ಹೋಗಿದ್ದ. ಕೆಲವು ಹೊತ್ತಿನ ಬಳಿಕ ತಾನೇ ಬಂದು ಲಾಕ್ ಓಪನ್ ಮಾಡಿ 8.65 ಲಕ್ಷ ಹಣ ಎಗರಿಸಿ ಪರಾರಿಯಾಗಿದ್ದಾನೆ.
8.65 ಲಕ್ಷ ರೂಪಾಯಿ ಹಣ ಎಗರಿಸಿದ ಭೂಪ, ಮೊದಲು ಅಮ್ಮನ ಆಸೆ ಈಡೇರಿಸಲು ಮುಂದಾಗಿದ್ದಾನೆ. ಈತನ ಅಮ್ಮ ಚಿನ್ನಾಭರಣವನ್ನು ಹೆಚ್ಚು ಇಷ್ಟಪಡುತ್ತಿದ್ದಳಂತೆ. ಅದಕ್ಕಾಗಿ ಕದ್ದ ಹಣದಲ್ಲಿ 20 ಗ್ರಾಂನಲ್ಲಿ ಚಿನ್ನದ ಸರವನ್ನು ಮಾಡಿಸಿಕೊಟ್ಟಿದ್ದಾನೆ. ಉಳಿದ ಹಣದಲ್ಲಿ ಮೋಜು ಮಸ್ತಿ ಮಾಡಲು ಮುಂದಾಗಿದ್ದಾನೆ. ಪ್ರಕರಣ ಬೇಧಿಸಿದ ಪೊಲೀಸರು 5.74 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ.