ಬೆಳಗಾವಿ: ಕಾರಿನಲ್ಲಿ ನಕಲಿ ನೋಟುಗಳನ್ನು ಸಾಗಾಟ ಮಾಡುತ್ತಿದ್ದ ಐವರನ್ನು ಬಂಧಿಸಿರುವ ಘಟನೆ ಗೋಕಾಕ್ ಬೆಳಗಾವಿ ರಸ್ತೆಯ ಕಡಬಗಟ್ಟಿ ಗ್ರಾಮದ ಬಳಿ ನಡೆದಿದೆ.
ಗೋಕಾಕಿನ ಬೆಳಗಾವಿ ರಸ್ತೆಯ ಕಡಬಗಟ್ಟಿ ಗ್ರಾಮದ ಮೂಲಕ ಸಾಗುವ ರಸ್ತೆಯಲ್ಲಿ ಕಾರೊಂದನ್ನು ಪೊಲೀಸರು ಪರಿಶೀಲನೆ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮೂಡಲಗಿ ತಾಲೂಕಿನ ಅರಭಾವಿ ಅನ್ವರ ಮೊಮ್ಮದಸಲಿಂ ಯಾದವಾಡ, ಮಹಾಲಿಂಗಪುರದ ಸದ್ದಾಂ ಮುಸಾ ಯಡಹಳ್ಳಿ, ರವಿ ಚನ್ನಪ್ಪ ಹ್ಯಾಗಡಿ, ದುಂಡಪ್ಪ ಮಹಾದೇವ ವನಶನವಿ ಹಾಗೂ ವಿಠ್ಠಲ ಹನುಮಂತ ಹೊಸಕೋಟೆ ಬಂಧಿತರು. ಇವರು ಕಾರಿನಲ್ಲಿ 100 ಹಾಗೂ 500 ರೂ ಮುಖಬೆಲೆ ನಕಲಿ ನೋಟುಗಳನ್ನು ಸಾಗಾಟ ಮಾಡುವ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಆರೋಪಿತರಿಂದ ಹೆಚ್ಚಿನ ವಿಚಾರಣೆ ನಡೆಸಿದಾಗ, ಅವರು ಗೋಕಾಕ, ಮಹಾಲಿಂಗಪೂರ, ಮುಧೋಳ, ಯರಗಟ್ಟಿ, ಹಿಡಕಲ್ ಡ್ಯಾಂ, ಬೆಳಗಾವಿ, ಧಾರವಾಡ ಮುಂತಾದ ಸ್ಥಳಗಳಲ್ಲಿ 1 ಲಕ್ಷ ಅಸಲಿ ನೋಟುಗಳಿಗೆ 4 ಲಕ್ಷ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಘಟನೆ ಕುರಿತು ಐವರನ್ನು ಬಂಧಿಸಲಾಗಿದ್ದು, ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.