ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಗೂಗಲ್ ಮ್ಯಾಪ್ ನಂಬಿ ವೇಗವಾಗಿ ಕಾರು ಚಾಲಿಯಿಸಿ, ನಿರ್ಮಾಣ ಹಂತದ ಸೇತುವೆ ಮೇಲಿನಿಂದ ಬಿದ್ದು ಮೂವರು ಪ್ರಾಣ ಕಳೆದುಕೊಂಡಿದ್ದರು. ಇದರ ಬೆನ್ನಲ್ಲೇ ಕರ್ನಾಟಕದ ಬೆಳಗಾವಿಯ ದಟ್ಟ ಅರಣ್ಯದ ನಡುವೆ ಕುಟುಂಬವೊಂದು ಭಯದಲ್ಲೇ ಒಂದು ರಾತ್ರಿ ಕಳೆದಿದೆ.
ಗೂಗಲ್ ಮ್ಯಾಪ್ ನಂಬಿ ಎಲ್ಲಿಗಾದರೂ ಹೋಗಬೇಕು ಎನ್ನುವಾಗ ಸ್ವಲ್ಪ ಜಾಗ್ರತೆಯಿಂದ ಇರಬೇಕು. ಏಕೆಂದರೆ ಕೆಲವೊಮ್ಮೆ ಈ ಆ್ಯಪ್ನಿಂದ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಬಿಹಾರ ಮೂಲದ ರಣಜಿತ್ ದಾಸ್ ಎನ್ನುವರ ಕುಟುಂಬ ಕಾರಿನಲ್ಲಿ ಗೋವಾಕ್ಕೆ ಪ್ರಯಾಣ ಮಾಡುತ್ತಿದ್ದರು. ಇವರು ಗೂಗಲ್ ಮ್ಯಾಪ್ ಅನ್ನೇ ನಂಬಿ ಹೋಗುತ್ತಿದ್ದರು. ಅದು ತೋರಿಸಿದಂತೆ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಆದರೆ ಮ್ಯಾಪ್ ಶಿರೋಲಿ ಮತ್ತು ಹೆಮ್ಮಡಗಾ ಮಾರ್ಗ ಸಮೀಪದ ದಾರಿ ತೋರಿಸಿದೆ. ಹೀಗಾಗಿ ಬಿಹಾರದ ಕುಟುಂಬ ಕಾರಿನಲ್ಲಿ ಹಾಗೇ ಬೆಳಗಾವಿಯ ಖಾನಾಪುರ ಭೀಮಗಢ ಅರಣ್ಯದ ಒಳಗೆ ಸುಮಾರು 7 ರಿಂದ 8 ಕಿಲೋ ಮೀಟರ್ ದೂರ ಹೋಗಿದ್ದಾರೆ. ಆದರೆ ರಾತ್ರಿ ಆಗಿದ್ದರಿಂದ ಕತ್ತಲಿನಲ್ಲಿ ಅವರು ವಾಪಸ್ ಬರಲು ಭಯಭೀತರಾಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಸಿಗದೇ ಕುಟುಂಬ ಪರದಾಡಿದೆ.
ಇನ್ನು ಈ ಕುಟುಂಬ ಕಾರಿನಲ್ಲೇ ಇಡೀ ರಾತ್ರಿ ಭಯದಲ್ಲೇ ಕಳೆದಿದೆ. ಬಳಿಕ ಧೈರ್ಯ ಮಾಡಿ 4 ಕಿಲೋ ಮೀಟರ್ವರೆಗೆ ಹಿಂದಕ್ಕೆ ಬಂದ ಮೇಲೆ ಮೊಬೈಲ್ ನೆಟ್ವರ್ಕ್ ಸಿಕ್ಕಿದೆ. ತಕ್ಷಣ ಸಹಾಯಕ್ಕಾಗಿ 112 (ಪೊಲೀಸರಿಗೆ) ನಂಬರ್ಗೆ ಕರೆ ಮಾಡಿ ಕುಟುಂಬದ ಸದಸ್ಯರು ತಮ್ಮ ಸಮಸ್ಯೆಯನ್ನ ಸಂಪೂರ್ಣವಾಗಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾಡಿನಿಂದ ಕುಟುಂಬಸ್ಥರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.