ಬೆಳಗಾವಿ: ಸದನದಲ್ಲಿ ಇಂದು 268 ಕೋಟಿ ರೂ.ಗಳ ಹಗರಣವನ್ನು ಹೊರಕ್ಕೆ ತರಲು ಪ್ರಯತ್ನಿಸಿದ್ದೇವೆ. ನಿಲುವಳಿ ಸೂಚನೆ ಮಂಡಿಸಿದಾಗ ತಾಂತ್ರಿಕ ವಿಚಾರ ಎಂದು ಅವಕಾಶ ನಿರಾಕರಿಸಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮತ್ತು ಇಂಧನ ಸಚಿವ ಜಾರ್ಜ್ ಅವರು 268 ಕೋಟಿ ಮೊತ್ತದ ಈ ಭ್ರಷ್ಟಾಚಾರ ಪ್ರಕರಣದ ಜವಾಬ್ದಾರಿ ತೆಗೆದುಕೊಂಡು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಪವರ್ ಕಾರ್ಪೊರೇಶನ್ನ ಅಧ್ಯಕ್ಷರಾಗಿದ್ದು, ಅವರು ಉತ್ತರ ಕೊಡಬಹುದಾಗಿತ್ತು. ರಾಯಚೂರು ಥರ್ಮಲ್ ಪ್ಲಾಂಟ್ನಲ್ಲಿ 128 ಕೋಟಿ ರೂ.ಗಳ ಟೆಂಡರ್, ಬಳ್ಳಾರಿ ಥರ್ಮಲ್ ಪ್ಲಾಂಟ್ನಲ್ಲಿ 140 ಕೋಟಿ ರೂ.ಗಳ ಟೆಂಡರ್ ನಲ್ಲಿ ಹಗರಣ ಆಗಿದೆ. ಇವೆರಡೂ ಅಂತಾರಾಷ್ಟ್ರೀಯ ಬಿಡ್ನಡಿ ಬರುತ್ತವೆ. ಇವರು ಒಂದೊಂದು ಟೆಂಡರನ್ನು ನಾಲ್ಕು ನಾಲ್ಕು ತುಂಡಾಗಿ ಪರಿವರ್ತಿಸಿದ್ದಾರೆ ಎಂದು ಟೀಕಿಸಿದರು.
ತುಂಡು ಗುತ್ತಿಗೆಗೆ ಅವಕಾಶವಿಲ್ಲ, ಅಂದಾಜು ವೆಚ್ಚ ಹೆಚ್ಚಿಸಿದ್ದು, ಇದು ಅಧಿಕಾರಿಗಳ ಕೆಲಸ, ವೆಲ್ಡಿಂಗ್, ಪೈಂಟಿಂಗ್, ಹಾನಿ ನಿಯಂತ್ರಣಕ್ಕೆ 30 ಕೋಟಿ ಬದಲಾಗಿ 128 ಕೋಟಿಗೆ ಕೊಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಎಸ್ ಪ್ರಿನ್ಸ್ ಹೈಟೆಕ್ ಪ್ರೈವೆಟ್ ಲಿಮಿಟೆಡ್ ಕಂಪೆನಿಗೆ 41 ಕೋಟಿ 22 ಲಕ್ಷ, 38 ಕೋಟಿ 12 ಲಕ್ಷದ ಇನ್ನೊಂದು ಟೆಂಡರನ್ನು ಇದೇ ಕಂಪೆನಿಗೆ ಕೊಟ್ಟಿದ್ದಾರೆ. 24 ಕೋಟಿ 76 ಲಕ್ಷದ ಮತ್ತೊಂದು ಟೆಂಡರನ್ನೂ ಅದೇ ಕಂಪೆನಿಗೆ ಕೊಟ್ಟಿದ್ದಾರೆ. 24 ಕೋಟಿ 25 ಲಕ್ಷದ ಮತ್ತೊಂದು ಟೆಂಡರ್ ಅದೇ ಕಂಪೆನಿ ಪಾಲಾಗಿದೆ. 23/8/2024 ಎಂಬ ಒಂದೇ ದಿನಾಂಕ ನಮೂದಾಗಿದೆ ಎಂದರು.
ಟೆಂಡರ್ ಹಾಕಿದವರೆಲ್ಲರೂ ಒಂದೇ ಕಂಪೆನಿಯವರು. ಅರುಲ್ ರೇಗನ್ (ಎಸ್ ಪ್ರಿನ್ಸ್), ಮೇರಿ ಕಲಾ ಸ್ಟಾಲಿನ್ (ಎಸ್ ಪ್ರಿನ್ಸ್), ಪ್ರಿಯಾ ಟೆಕ್ (ಎಸ್ ಪ್ರಿನ್ಸ್) ಕೂಡ ಬಿಡ್ ಮಾಡಿದ್ದು, ಎಲ್ಲರೂ ಒಂದೇ ಕಂಪೆನಿಯವರು. ಈ ಥರ ಮಾಡಿ ದುಡ್ಡು ಹೊಡೆಯುವ ಕೆಲಸ ಮಾಡಿದ್ದಾರೆ. ಇದು ಇವತ್ತು ಪ್ರಸ್ತಾಪ ಆಗಬೇಕಿತ್ತು. ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರು 8/9/24ರಂದು ಪತ್ರ ಬರೆದು, ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಬೇಕು; ಅಂದಾಜು ಮೊತ್ತವನ್ನು ಮರು ಪರಿಶೀಲಿಸಲು ಇಂಧನ ಇಲಾಖೆಗೆ ಕೋರಿದ್ದರು ಎಂದು ತಿಳಿಸಿದರು.
140 ಕೋಟಿ ರೂ.ಗಳ ಟೆಂಡರ್ ಇದೇ ತಿಂಗಳ 4ರಂದು ಬಿಡ್ ಕರೆದಿದ್ದು, ಕೇವಲ 4 ದಿನದಲ್ಲಿ ಅಂದರೆ 9ರಂದು ಬಿಡ್ ಕುರಿತ ಸಭೆ ನಡೆಸಲಾಯಿತು. ಅದನ್ನೂ 4 ಭಾಗವಾಗಿ ವಿಂಗಡಿಸಿ ಇದೇ ಕಂಪೆನಿಗಳಿಗೆ ನೀಡುತ್ತಿದ್ದಾರೆ ಎಂದು ದೂರಿದರು. ವಿಭಜಿಸಿ ಟೆಂಡರ್ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಬಿಡ್ ಮಾಡದೆ ಸ್ಥಳೀಯ ಬಿಡ್ ಕರೆದುದೇಕೆ ಎಂದು ಪ್ರಶ್ನಿಸಿದರು.
ಮೊದಲನೇ ಬಿಡ್ ಸಂಬಂಧ ಕೇವಲ 2 ತಿಂಗಳಲ್ಲಿ 40 ಕೋಟಿ ಬಿಡುಗಡೆ ಮಾಡಿದ್ದಾರೆ. ರಾಜ್ಯದಲ್ಲಿ ಅದೆಷ್ಟೋ ಗುತ್ತಿಗೆದಾರರು ಕೆಲಸ ಮಾಡಿ 2 ವರ್ಷ ಆದರೂ ಹಣ ಬಿಡುಗಡೆ ಆಗಿಲ್ಲ; ಇಲ್ಲಿ ಕೇವಲ 2 ತಿಂಗಳಲ್ಲಿ 40 ಕೋಟಿಯನ್ನು ಮುಂಗಡದ ರೂಪದಲ್ಲಿ ನೀಡಿದ್ದಾರೆ ಎಂದು ಟೀಕಿಸಿದರು.
ಹಿಂದೆ ಸಚಿವ ಎಚ್.ಕೆ.ಪಾಟೀಲರು ಟೆಂಡರ್ ವಿಭಜಿಸಿದವರನ್ನು (ಸ್ಪ್ಲಿಟ್) ಅಮಾನತು ಮಾಡಿದ್ದರು. ಅವರ ಮೇಲೆ ಗುರುತರ ಆರೋಪ ಹೊರಿಸಿ, ಭ್ರಷ್ಟಾಚಾರಕ್ಕೆ ದಾರಿ ಎಂದು ಪ್ರಕರಣ ದಾಖಲಾಗಿತ್ತು. ಈಗ ಅದೇ ಸರಕಾರವು ಈ ರೀತಿ ಮಾಡಿದ್ದನ್ನು ಯಾವ ರೀತಿ ಪರಿಗಣಿಸಬೇಕು ಎಂದು ಪ್ರಶ್ನೆಯನ್ನು ಮುಂದಿಟ್ಟರು. ಪ್ರಭಾರ ತಾಂತ್ರಿಕ ನಿರ್ದೇಶಕರು (ಇನ್ಚಾರ್ಜ್ ಟೆಕ್ನಿಕಲ್ ಡೈರೆಕ್ಟರ್) ಇದನ್ನು ಮಾಡಿದ್ದು, ಅವರು ಈ ರೀತಿ ಟೆಂಡರ್ ಮಾಡುವಂತಿಲ್ಲ. ಇದು 268 ಕೋಟಿಯ ಭ್ರಷ್ಟಾಚಾರದ ಪ್ರಕರಣ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳು ಜನವರಿ 1, 2024ರಂದು ತಮ್ಮ ಆದೇಶದಲ್ಲಿ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಹಾಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನಿವೃತ್ತ ಸರಕಾರಿ ಅಧಿಕಾರಿಗಳು ಅಥವಾ ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸಲು ಸೂಚಿಸಿದ್ದರು. ಆದೇಶವÀನ್ನು ರಜನೀಶ್ ಗೋಯಲ್ ಅವರು ಎಲ್ಲ ಇಲಾಖೆಗಳಿಗೆ ಕಳುಹಿಸಿದ್ದರು ಎಂದು ತಿಳಿಸಿದರು. ಆದರೆ, ಆರ್.ನಾಗರಾಜ್ ಅವರು ನಿವೃತ್ತರಾದ ಬಳಿಕ ಇದೇ ಇಲಾಖೆಯಲ್ಲಿ 6 ವರ್ಷಗಳಿಂದ ಇದ್ದು, ಇದೆಲ್ಲವನ್ನೂ ಮಾಡಿದ ಮುಖ್ಯ ವ್ಯಕ್ತಿ; ಹೇಗೆ ಹಣ ಹೊಡೆದು ಸರಕಾರಕ್ಕೆ ದುಡ್ಡು ಕೊಡಬೇಕೆಂಬ ಅವರಿಗೆ ಚೆನ್ನಾಗಿ ಗೊತ್ತಿದೆ. ಅವರನ್ನು 6 ವರ್ಷಗಳಿಂದ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು. ಗೌರವ್ ಗುಪ್ತ ಅವರು ಟೆಂಡರ್ ತಜ್ಞರು. ಅವರೇ ಇದರ ಕಾರ್ಯದರ್ಶಿ. ಇಲಾಖೆ ಸಚಿವರು ಜಾರ್ಜ್ ಅವರು. ಇವರ ಮೂಗಿನ ಕೆಳಗೆ ಇದೆಲ್ಲ ನಡೆದಿದೆ ಎಂದು ಟೀಕಿಸಿದರು.