ಬೆಳಗಾವಿ ತಾಲೂಕಿನ ಕಲಕಾಂಬ ಗ್ರಾಮ ಪಂಚಾಯ್ತಿ ಕಟ್ಟಡಕ್ಕೆ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ತೀವ್ರ ಗಲಾಟೆ ಆಗಿದ್ದು, ಅದೇ ವಿಚಾರಕ್ಕೆ ತಡರಾತ್ರಿ ಕಿಡಿಗೇಡಿಗಳಿಂದ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ತಡರಾತ್ರಿ ಆಗಮಿಸಿದ್ದ ಕಿಡಿಗೇಡಿಗಳು ಬಿಯರ್ ಬಾಟಲ್ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಬಂದು ಬಟ್ಟೆಗಳಿಗೆ ಪೆಟೋಲ್ ಸುರಿದು ಕಟ್ಟಡದೊಳಗೆ ಹಾಕಿ ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾರೆ. ಅಲ್ಲದೇ, ಗ್ರಾಮ ಪಂಚಾಯಿತಿ ಆವರಣ ಹಾಗೂ ಒಳಗಡೆ ಬಿಯರ್ ಬಾಟಲ್ಗಳನ್ನು ಎಸೆಯಲಾಗಿದೆ. ಘಟನೆ ಬಳಿಕ ಸಿಕ್ಕಿಹಾಕಿಕೊಳ್ಳುವ ಭಯದಿಂದ ಗ್ರಾಮ ಪಂಚಾಯ್ತಿ ಕಟ್ಟಡದ ಸಿಸಿಟಿವಿ ಕ್ಯಾಮೆರಾ ಕಿತ್ತುಕೊಂಡು ಹೋಗಿದ್ದಾರೆ. ಮಾರಿಹಾಳ ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟಿದ್ದು ಕಿಡಿಗೇಡಿಗಳ ಪತ್ತೆ ಬಲೆ ಬೀಸಿದ್ದಾರೆ.