ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ತಿಂಗಳ 19ರಿಂದ 21ರವರೆಗೆ 27ನೇ ಬೆಂಗಳೂರು ಟೆಕ್ ಶೃಂಗ- ‘ಬಿಟಿಎಸ್-2024′ ನಡೆಯಲಿದೆ’ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
‘ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್ಟಿಪಿಐ) ಸಹಭಾಗಿತ್ವದಲ್ಲಿ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯು ಈ ಶೃಂಗವನ್ನು ಆಯೋಜಿಸಿದೆ. ‘ಅಂಡ್’ ಎಂಬ ವಿಷಯದಡಿ ಸ್ಟಾರ್ಟ್ಅಪ್ಗಳ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿಸಿ ಜಾಗತಿಕ ಪಾಲುದಾರಿಕೆಯ ನಿರೀಕ್ಷೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೃಂಗವನ್ನು ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜರ್ಮನಿಯ ಆರ್ಥಿಕ ವ್ಯವಹಾರ ಮತ್ತು ಫೆಡರಲ್ ಸಚಿವಾಲಯದ ಸ್ಟಾರ್ಟ್ ಅಪ್ಗಳ ಆಯುಕ್ತ ಅನ್ನಾ ಕ್ರಿಸ್ಟ್ಮನ್ ಮತ್ತು ಫ್ರಾನ್ಸ್ನ ಆರ್ಥಿಕ ಅಭಿವೃದ್ಧಿಯ ರಿಕವರಿ ವಿಭಾಗದ ಉಪಾಧ್ಯಕ್ಷೆ ಅಲೆಕ್ಸಾಂಡ್ರಾ ಡಬ್ಲಾಂಚೆ, ಟೆಕ್ಸಾಸ್ ಇನ್ನುಮೆಂಟ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್, ಸ್ವಿಗ್ಗಿ ಸಂಸ್ಥೆಯ ಸಹ-ಸ್ಥಾಪಕರು ಮತ್ತು ಸಿಇಒ ಶ್ರೀಹರ್ಷ ಮೆಜೆಟಿ, ಬಯೋಕಾನ್ನ ಕಾರ್ಯಕಾರಿ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ಕಿರಣ್ ಮಜುಂದಾರ್-ಶಾ, ಕ್ರಿಸ್ ಗೋಪಾಲಕೃಷ್ಣನ್ ಮುಂತಾದವರು ಭಾಗವಹಿಸಲಿದ್ದಾರೆ’ ಎಂದು ಅವರು ವಿವರಿಸಿದರು.
‘ಉದ್ಘಾಟನಾ ಸಮಾರಂಭದಲ್ಲಿ ಸ್ವಿಟ್ಟರ್ಲೆಂಡ್ ಮತ್ತು ಫಿನ್ಲ್ಯಾಂಡ್ನೊಂದಿಗೆ ಎರಡು ತಿಳಿವಳಿಕೆ ಪತ್ರಗಳಿಗೆ ಸಹಿ ಮತ್ತು ಶಾರ್ಜಾ ಇನ್ನೋವೇಶನ್ ಅಥಾರಿಟಿ (ಯುಎಇ) ಜೊತೆ ಜಾಗತಿಕ ಸಹಯೋಗವನ್ನು ಉತ್ತೇಜಿಸುವ ಉದ್ದೇಶದ ಪತ್ರಕ್ಕೆ ಸಹಿ ಹಾಕಲಾಗುವುದು. ಈ ಶೃಂಗದಲ್ಲಿ ಆಸ್ಟ್ರೇಲಿಯಾ, ಯುಕೆ, ಫ್ರಾನ್ಸ್, ಆಸ್ಟ್ರಿಯಾ, ಡೆನ್ಮಾರ್ಕ್, ಫಿನ್ಸೆಂಡ್, ಪೋಲೆಂಡ್, ಜಪಾನ್, ಜರ್ಮನಿ, ಸ್ವಿಟ್ಸರ್ಲೆಂಡ್, ಇಸ್ರೇಲ್ ಮತ್ತು ಯುಎಸ್ಎ ಸೇರಿದಂತೆ 15ಕ್ಕೂ ಹೆಚ್ಚು ದೇಶಗಳ ಉನ್ನತ ಮಟ್ಟದ ನಿಯೋಗಗಳು ಭಾಗವಹಿಸಲಿವೆ’ ಎಂದರು.