ನಟ ದರ್ಶನ್ಗೆ ವಿಶೇಷ ಸೌಲಭ್ಯ ಪ್ರಕರಣ ಬೆನ್ನಲ್ಲೇ ಅಕ್ರಮ ಚಟುವಟಿಕೆಗಳಿಗೆ ಶಾಶ್ವತವಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ಮೂರು ಕಾರಾಗೃಹಗಳಾಗಿ ವಿಭಜಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಏಳೆಂಟು ತಿಂಗಳ ಹಿಂದೆಯೇ ಪರಪ್ಪನ ಅಗ್ರಹಾರ ಕಾರಾಗೃಹದ ವಿಭಜನೆ ಸಂಬಂಧ ರಾಜ್ಯ ಬಂದೀಖಾನೆ ಮತ್ತು ಸುಧಾರಣಾ ಸೇವೆ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಗೆ ದರ್ಶನ್ ಪ್ರಕರಣದ ಪರಿಣಾಮ ರಾಜ್ಯ ಸರ್ಕಾರ ಸಮ್ಮತಿಸುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳ ಅಭಿಪ್ರಾಯ ಪಡೆಯಲು ಗೃಹ ಇಲಾಖೆ ಮುಂದಾಗಿದೆ.
ಸರ್ಕಾರವು ಹಸಿರು ನಿಶಾನೆ ತೋರಿದರೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಕೈದಿ, ವಿಚಾರಣಾಧೀನ ಕೈದಿ ಹಾಗೂ ಮಹಿಳಾ ಕೈದಿಗಳ ಕಾರಾಗೃಹಗಳಾಗಿ ವಿಂಗಡಣೆಯಾಗಲಿದೆ. ಅಲ್ಲದೆ ರಾಜ್ಯದ ಬಹುದೊಡ್ಡ ಜೈಲು ಮೂರು ಹೋಳಾಗುವುದರಿಂದ ಅಧಿಕಾರಿ ಮತ್ತು ಸಿಬ್ಬಂದಿ ಪ್ರತ್ಯೇಕವಾಗಲಿದ್ದು, ಇದು ಜೈಲಿನ ಭದ್ರತೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಹೇಳಲಾಗಿತ್ತು.
ಈ ಬಗ್ಗೆ ಇಂದು ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಭದ್ರತೆ ಧೃಷ್ಟಿಯಿಂದ ಆಂತರಿಕಾ ಆಡಳಿತ ವಿಭಾಗ ಮಾಡಬಹುದು, ಮೂರು ಜೈಲು ಮಾಡೋಕೆ ಆಗಲ್ಲ, ಒಳಗಡೆ ಮೂರು ಬ್ಲಾಕ್ ಇದೆ. ಬೇರೆ ಬ್ಯಾರಕ್ ಇದೆ, ಜೈಲಿನಲ್ಲಿ ತನಿಖಾ ಹಂತದ ಖೈದಿಗಳು, ಲೈಪ್ ಪ್ರಿಸನರ್ಸ್ ಅವರನ್ನೆಲ್ಲ ಬೇರೆ ಇಟ್ಟಿರ್ತಾರೆ, ಅದನ್ನ ಜೈಲಿನ ಅಧಿಕಾರಿಗಳಿಗೆ ಬಿಟ್ಟಿದ್ದೆವೆ ಎಂದು ಪ್ರತಿಕ್ರಿಯಿಸಿದರು.