ರಾಜಸ್ಥಾನದಿಂದ ಬೆಂಗಳೂರಿಗೆ ಕುರಿ ಮಾಂಸದ ಬದಲು ನಾಯಿ ಮಾಂಸ ಸರಬರಾಜಾಗುತ್ತಿದೆ ಎಂದು ಮಾಂಸದ ವ್ಯಾಪಾರಿಗಳು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರೈಲಿನ ಮೂಲಕ ರಾಜಸ್ಥಾನದಿಂದ ನಗರಕ್ಕೆ ತರಲಾಗಿದ್ದ ಮಾಂಸವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಂಸವನ್ನು ಇನ್ನ ಆಹಾರ ಇಲಾಖೆಯ ಅಧಿಕಾರಿಗಳು ಈ ಮಾಂಸವು ನಾಯಿಯದ್ದೋ ಅಥವಾ ಕುರಿಯದ್ದೋ ಎಂದು ಪತ್ತೆ ಮಾಡಲು, ಮಾಂಸದ ಮಾದರಿಯನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಶುಕ್ರವಾರ ರಾಜಸ್ಥಾನದಿಂದ ಸುಮಾರು 90 ಬಾಕ್ಸ್ಗಳಲ್ಲಿ ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಮಾಂಸವು ಸರಬರಾಜಾಗಿತ್ತು. ಈ ಬಗ್ಗೆ ಅನುಮಾನಗೊಂಡ ಹಿಂದೂಪರ ಸಂಘಟನೆಗಳು ದಾಳಿ ನಡೆಸಿ, ಸರಬರಾಜಾಗಿರುವ ಮಾಂಸವು ಕುರಿಯದ್ದಲ್ಲ. ನಾಯಿ ಮಾಂಸ ಎಂದು ಅನುಮಾನ ವ್ಯಕ್ತಪಡಿಸಿದರು. ಈ ವೇಳೆ ಉದ್ಯಮಿ ಅಬ್ದುಲ್ ರಜಾಕ್ ಅವರು 90 ಬಾಕ್ಸ್ಗಳಲ್ಲಿದ್ದ ಮಾಂಸವನ್ನು ಪರಿಶೀಲಿಸಲು ಅವಕಾಶ ಕೊಡದೆ ಅಡ್ಡಿಪಡಿಸಿದ್ದರು. ಅಲ್ಲದೇ ಇದು ನಾಯಿ ಮಾಂಸವಲ್ಲ, ಕುರಿಯ ಮಾಂಸವಾಗಿದ್ದು, ಹಲವು ವರ್ಷಗಳಿಂದ ಮಾಂಸದ ಉದ್ಯಮ ನಡೆಸುತ್ತಿದ್ದೇವೆ. ಅದಕ್ಕೆ ಬೇಕಾದ ಎಲ್ಲಾ ಪರವಾನಗಿಯನ್ನು ಪಡೆದಿದ್ದೇವೆ ಎಂದು ಸ್ಪಷ್ಟನೆ ನೀಡಿದರೂ, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಒಪ್ಪಲಿಲ್ಲ. ಇದು ನಾಯಿಯ ಮಾಂಸವಾಗಿದ್ದು, ಪರಿಶೀಲಿಸಲು ಬಿಡುವಂತೆ ಆಗ್ರಹಿಸಿದರು.
ಈ ವೇಳೆ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಒಂದೆರಡು ಬಾಕ್ಸ್ಗಳನ್ನು ತೆರೆದು ನೋಡಿದ್ದು, ಅದರಲ್ಲಿ ಮಟನ್ ಮಾಂಸದ ಬದಲಾಗಿ ನಾಯಿ ಮಾಂಸ ಪತ್ತೆಯಾಗಿದೆ ಎಂದು ಹಿಂದೂ ಕಾರ್ಯಕರ್ತರು ಗಲಾಟೆ ಆರಂಭಿಸಿದರು. ಕೆಲ ಹಿಂದೂಪರ ಕಾರ್ಯಕರ್ತರು ರೈಲಿನಲ್ಲಿ ಬಂದಿದ್ದ ಮಾಂಸವನ್ನು ಎತ್ತಿ ನೋಡಿದ್ದು ಉದ್ದ ಬಾಲವಿರುವ ನಾಯಿಯ ಆಕಾರದಲ್ಲಿ ಹೋಲುತ್ತಿರುವ ಮಾಂಸವನ್ನು ಕಂಡು ಮತ್ತಷ್ಟು ಜನರು ಗುಂಪು ಸೇರಿದ್ದರಿಂದ ಪರಿಸ್ಥಿತಿ ತೀವ್ರತೆ ಪಡೆದುಕೊಂಡಿತು. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿ, ಮಾಂಸವನ್ನು ಪರೀಕ್ಷೆಗೆ ಒಳಪಡಿಸಲು ಆಹಾರ ಇಲಾಖೆ ಅಧಿಕಾರಿಗಳ ಮೊರೆ ಹೋದರು.