ಬೆಂಗಳೂರಿನಿಂದ ತುಮಕೂರಿಗೆ ಮಾರ್ಗ ವಿಸ್ತರಣೆ ಮಾಡಲು ಈಗಾಗಲೇ ಬಿಎಂಆರ್ಸಿಎಲ್ ಸಿದ್ಧತೆ ನಡೆಸಿದೆ. ಇದರ ಜೊತೆಗೆ ಇದೀಗ ಮತ್ತೊಂದು ಸಿಹಿ ಸುದ್ದಿ ಹೊರಬಿದ್ದಿದೆ. ರಾಮನಗರಕ್ಕೆ ನಮ್ಮ ಮೆಟ್ರೋ ರೈಲು ಸಂಚಾರ ನಡೆಸಲಿದೆ ಎಂಬ ಮಾತು ಹಲವು ದಿನಗಳಿಂದ ಕೇಳಿ ಬರುತ್ತಿದೆ. ಈ ನಡುವೆ ರಾಮನಗರ ಜಿಲ್ಲೆಯ ಬಿಡದಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಕುರಿತು ಬಿಎಂಆರ್ಸಿಎಲ್ ಮೊದಲ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ವರದಿ ತಯಾರು ಮಾಡಲು ಟೆಂಡರ್ ಸಹ ಕರೆದಿದೆ.
ಕರ್ನಾಟಕ ಸರ್ಕಾರ ಕಾರ್ಯಸಾಧ್ಯತೆಯ ಅಧ್ಯಯನ ವರದಿಯ ಅನ್ವಯ ಬಿಡದಿಗೆ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಮಾಡಲು ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಈ ವರದಿಗೆ ಒಪ್ಪಿಗೆ ಸಿಕ್ಕಿದರೆ ಬಿಎಂಆರ್ಸಿಎಲ್ ವಿಸ್ತೃತ ಯೋಜನಾ ವರದಿ ತಯಾರು ಮಾಡಲು ಪ್ರತ್ಯೇಕ ಟೆಂಡರ್ ಕರೆಯಲಿದೆ. ಇನ್ನೂ ಬೆಂಗಳೂರು ನಗರದ ಹೊರವಲಯಕ್ಕೂ ಕೈಗಾರಿಕೆ, ಹೂಡಿಕೆಗಳನ್ನು ಆಕರ್ಷಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಬಿಡದಿಯನ್ನು ಕೈಗಾರಿಕಾ ಹಬ್ ಆಗಿ ಪರಿವರ್ತನೆ ಮಾಡಿ ಬೆಂಗಳೂರು ನಗರದ ಮೇಲಿರುವ ಒತ್ತಡ ಕಡಿಮೆ ಮಾಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ಬಿಎಂಆರ್ಸಿಎಲ್ ಸಹ ಹೊರ ವಲಯಕ್ಕೆ ಮೆಟ್ರೋ ಸಂಪರ್ಕ ವಿಸ್ತರಣೆ ಮಾಡುವ ಚಿಂತನೆ ನಡೆಸುತ್ತಿದೆ.
ಬೆಂಗಳೂರು ನಗರದಿಂದ ಪ್ರತಿನಿತ್ಯ ಸಾವಿರಾರು ಜನರು ಬಿಡದಿಗೆ ಪ್ರಯಾಣಿಸುತ್ತಾರೆ. ಬಿಡದಿಯಲ್ಲಿ ಬೃಹತ್ ಕೈಗಾರಿಕಾ ಪ್ರದೇಶವಿದೆ. ಸುಮಾರು ಸಾವಿರಾರು ಸಂಖ್ಯೆಯ ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದು, ಈ ಮಾರ್ಗ ಸಿದ್ದವಾದರೆ ಬೆಂಗಳೂರಿನಿಂದ ಪ್ರತಿದಿನ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ. ಈ ಬಗ್ಗೆ ವಾಹನ ಸವಾರರು ಮತ್ತು ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತಪಡಿಸುತ್ತಾರೆ.